ಗೆಳೆಯನ ಜತೆ ಸ್ಪರ್ಧೆಗೆ ಬಿದ್ದ ಡೀಸೆಲ್ | ದೇಶದಲ್ಲಿ ಇಂದು 100 ರ ಗಡಿ ದಾಟಿದ ಡೀಸೆಲ್ ಬೆಲೆ !
ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಡೀಸೆಲ್ ದರ 100 ರೂಪಾಯಿ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರದಲ್ಲಿನ ಡೀಸೆಲ್ ಬಂಕ್ ಒಂದರಲ್ಲಿ ಪ್ರತಿ ಲೀಟರ್ ಡೀಸೆಲ್ ದರವು 100.5 ರೂಪಾಯಿ ಆಗಿದೆ. ಇಲ್ಲಿಯ ತನಕ ನಾವು ಪೆಟ್ರೋಲ್ ದರ ನೂರರ ಗಡಿ ದಾಟಿದ ಬಗ್ಗೆ ಮಾತನಾಡುತ್ತಿದ್ದರೆ, ಪೆಟ್ರೋಲ್ ಎಲ್ಲಾ ಆತ್ಮೀಯ ಗೆಳೆಯ, ಜೋಡಿದಾರ್ ಡೀಸೆಲ್ ನ ಬೆಲೆ ಕೂಡ ಸ್ಪರ್ಧೆಗೆ ಬಿದ್ದು ಮೇಲ್ಮುಖವಾಗಿ ಓಡುತ್ತಿದೆ.
ಶನಿವಾರ ಪ್ರತಿ ಲೀಟರ್ ಪೆಟ್ರೋಲ್‌ಗೆ 27 ಪೈಸೆ ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 23 ಪೈಸೆ ಏರಿಕೆ ಕಂಡಿದೆ. ಮೇ 4ರ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 5.75 ರೂಪಾಯಿ ಏರಿಕೆ ಕಂಡಿದ್ದರೆ ಡೀಸೆಲ್ ದರ ಪ್ರತಿ ಲೀಟರ್‌ಗೆ 6.25 ರೂಪಾಯಿ ಏರಿಕೆಯಾದಂತಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.12
ರೂಪಾಯಿ ಆಗಿದ್ದು ಡೀಸೆಲ್ ಪ್ರತಿ ಲೀಟರ್‌ಗೆ 86.98
ರೂಪಾಯಿಗೆ ಮಾರಾಟವಾಗಿದೆ. ದೆಹಲಿಯಲ್ಲಿ
ನಿಗದಿಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ದರ ಇಡೀ
ದೇಶಕ್ಕೆ ಮಾನದಂಡವಾಗಿದ್ದರೂ ಸಹ ದರದಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಏರಿಳಿತವಾಗುತ್ತದೆ. ಸ್ಥಳೀಯ ಸರಕಾರಗಳ ಟ್ಯಾಕ್ಸಿಗಳು ಮತ್ತು ಸಾಗಾಣಿಕಾ ವೆಚ್ಚಗಳು ಅಂತಿಮ ದರವನ್ನು ನಿಗದಿ ಮಾಡುತ್ತವೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿಗಳ ಗಡಿ ಮುಟ್ಟಲು ತುದಿಗಾಲಿನಲ್ಲಿ ನಿಂತಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 99.33 ರೂಪಾಯಿ ಆಗಿದೆ. ಮುಂಬೈ ಬಳಿಕ ಇಡೀ ದೇಶದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರ ಹೊಂದಿರುವ ನಗರ ಎಂಬ ಬೇಡದ ಹೆಗ್ಗಳಿಕೆ ಬೆಂಗಳೂರಿನದು. ಮುಂಬೈನಲ್ಲಿ ಪೆಟ್ರೋಲ್ ದರ ನೂರರ ಗಡಿ ದಾಟಿ ಹಲವು ದಿನಗಳಾದವು. ಅಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ 102.3 ರೂಪಾಯಿ ಹಾಗೂ ಡೀಸೆಲ್ ದರ 94.39 ರೂಪಾಯಿ ಆಗಿದೆ.