ಆಡಿಯೋ ತಿರುಚಿದ ಆರೋಪದಲ್ಲಿ ಸುನಿಲ್ ಬಜಿಲಕೇರಿ ಬಂಧನ | ಸಡಿಲ ಗೊಳ್ಳುತ್ತಿರುವ ಬಿಜೆಪಿ ಮತ್ತು ಹಿಂದುತ್ವದ ನಡುವಿನ ಬಂಧುತ್ವ !
ಮಂಗಳೂರು,ಜೂನ್ 9 : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂದರ್ಶನದ ವಿಡಿಯೋದ ಆಡಿಯೋವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಸುನಿಲ್ ಬಜಿಲಕೇರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಯುವತಿಯೊಬ್ಬಳು ಮಂಗಳೂರಿನ ಖಾಸಗಿ ಚಾನೆಲ್ನಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನದ ವೇಳೆ ಲೈವ್ ಫೋನ್ ಇನ್ ಕರೆ ಮಾಡಿ ನಳಿನ್ ಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು. ಇದಾದ ಬಳಿಕ ಸುನಿಲ್ ಬಜಿಲಕೇರಿಯನ್ನು ಆಕೆ ತರಾಟೆಗೆ ತೆಗೆದುಕೊಂಡಿದ್ದಳು.
ಆದ್ರೆ ಯುವತಿಯ ಆ ಆಡಿಯೋ ವನ್ನು ಚಾನೆಲ್ನ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನಕ್ಕೆ ಎಡಿಟ್ ಮಾಡಿ, ಯುವತಿ ಕಟೀಲ್ ರನ್ನು ತರಾಟೆಗೆ ತೆಗೆದುಕೊಂಡ ರೀತಿಯಲ್ಲಿ ಬಿಂಬಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಯುವತಿ ಲೈವ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಳೆ ಎಂಬ ರೀತಿಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗಿತ್ತು. ಈ ಸಂಬಂಧ ಚಾನೆಲ್ ನ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಬರ್ಕೆ ಪೋಲೀಸರು ಇದೀಗ ಬಜೀಲಕೆರಿಯನ್ನು ಬಂಧಿಸಿದ್ದಾರೆ. ಸುನಿಲ್ ಬಜಿಲಕೇರಿ ವಿರುದ್ಧ ಸೆ.426, 465, 469, 501, 505 ಮುಂತಾದ ಹಲವು ಸೆಕ್ಷನ್ ಗಳ ಅಡಿಯಲ್ಲಿ ಮೊಬೈಲ್ ದುರ್ಬಳಕೆ, ಮಾನಹಾನಿ, ಧ್ವನಿಮುದ್ರಣ ತಿರುಚಿದ ಆರೋಪ ಸೇರಿದಂತೆ ಸೆ.153(ಧರ್ಮಗಳ ನಡುವೆ ದ್ವೇಷ)ಕಠಿಣ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿಯೇ ಸುನಿಲ್ ಬಜಿಲಕೇರಿಯನ್ನು ವಶಕ್ಕೆ ಪಡೆದಿದ್ದರು. ಅವರನ್ನು, ನಿನ್ನೆ ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ನ್ಯಾಯಾಧೀಶರು ಆರೋಪಿ ಸುನಿಲ್ ಬಜಿಲಕೇರಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.
ಸಂಘಪರಿವಾರದ ಕಾರ್ಯಕರ್ತನಾಗಿ ದುಡಿದ ಸುನಿಲ್, ಕಳೆದ ಹಲವು ವರ್ಷಗಳಿಂದ ಈಗಿನ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನವನ್ನು ಸುನಿಲ್ ಬಜಿಲಕೇರಿ ಹೊಂದಿದ್ದರು. ಆಗಾಗ್ಗೆ ತಮ್ಮ ಅಸಮಾಧಾನವನ್ನು ಅವರು ವ್ಯಕ್ತಪಡಿಸುತ್ತಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಸುನಿಲ್ ಬಜಿಲಕೇರಿ ಅವರು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ಮೇಲೆ ಸರಣಿ ಆಪಾದನೆಗಳನ್ನು ಮಾಡಿದ್ದರು. ಬಜಿಲಕೇರಿ ವಿರುದ್ಧ ವೇದವ್ಯಾಸ ಕಾಮತ್ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇವೆಲ್ಲಾ ಬಜಿಲಕೇರಿ ಮತ್ತು ಬಿಜೆಪಿಯ ನಡುವೆ ಮನಸ್ತಾಪ ಹೆಚ್ಚಲು ಕಾರಣವಾಗಿತ್ತು.
ಇತ್ತೀಚೆಗೆ ಎಂಆರ್ಪಿಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಡೆಗಣಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇನ್ನು ಹಿಂದುತ್ವ ಅಲ್ಲ, ಬಂಧುತ್ವಕ್ಕಾಗಿ ಹೋರಾಟ ಎಂದು ಘೋಷಿಸಿದ್ದರು. ಅದು ಬಿಜೆಪಿ ಸೇರಿ ಹಲವರ ಕಣ್ಣು ಕೆಂಪಾಗಿಸಿತ್ತು. ಪಕ್ಷಕ್ಕಾಗಿ ನಿಸ್ವಾರ್ಥ ರಾಗಿ ದುಡಿದ ಹಿಂದೂ ಕಾರ್ಯಕರ್ತರನ್ನು ಯೂಸ್ ಆಂಡ್ ಥ್ರೋ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಹಿಂದುತ್ವ, ಸಂಘಟನೆ ಎಲ್ಲಾ, ಆ ನಂತರ ಯಾರನ್ನೂ ಕೇಳುವವರೇ ಇಲ್ಲ ಮುಂತಾದ ದೂರುಗಳು ಬಿಜೆಪಿ ನಾಯಕರುಗಳ ಮೇಲೆ ಇವೆ. ಇದೀಗ ಸುನಿಲ್ ಬಜಿಲಕೇರಿ ಬಂಧನಡೊಂಡಿಗೆ ಹಿಂದೂ ಸಂಘಟನೆ ಮತ್ತು ಬಿಜೆಪಿ ನಡುವೆ ಮತ್ತಷ್ಟು ಅಸಮಾಧಾನ ಭುಗಿಲೇಳು ವುದು ಖಚಿತ.