ಜೂನ್ 14 ರ ಬಳಿಕವೂ ಕೆಲ ಜಿಲ್ಲೆಗಳಿಗಿಲ್ಲ ಅನ್ ಲಾಕ್ ಭಾಗ್ಯ 14 ಬಳಿಕವೂ ಲಾಕ್ ಆಗುವ ಜಿಲ್ಲೆಗಳ ಪಟ್ಟಿಯಲ್ಲಿ ಇದೆಯೇ ದಕ್ಷಿಣ ಕನ್ನಡ?
ದಿನದಿಂದ ದಿನಕ್ಕೆ ಸೊಂಕೀತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ದೈನಂದಿನ ಡಿಸ್ಚಾರ್ಜ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸರಕಾರ ಹಂತ ಹಂತವಾಗಿ ರಾಜ್ಯವನ್ನು ಅನ್‌ಲಾಕ್ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ 14 ರಂದು ಯಾವಯಾವ ಕ್ಷೇತ್ರಕ್ಕೆ ಅನ್‌ಲಾಕ್ ಭಾಗ್ಯ ಸಿಗಲಿದೆ ಎನ್ನುವುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ.
ಈ ನಡುವೆ ಬೆಂಗಳೂರಿಗೆ ಒಂದು ಮಾರ್ಗಸೂಚಿ ಯ ಜೊತೆಗೆ ರಾಜ್ಯದ ಇತರ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಬೀಳುವ ಸಾಧ್ಯತೆಯಿದೆ.
ಜೂನ್ 14ರ ಬಳಿಕ ಅನ್‌ಲಾಕ್
ತಜ್ಞರ ವರದಿಯ ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹಂತ-ಹಂತವಾಗಿ ಅನ್‌ಲಾಕ್ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅನ್‌ಲಾಕ್ ಕುರಿತು ತಾಂತ್ರಿಕ ಸಲಹಾ ಸಮಿತಿ ಸೋಮವಾರ (ಜೂನ್ 7) ಸರ್ಕಾರಕ್ಕೆ ವರದಿ ನೀಡಿದೆ.
ಈಜುಕೊಳ, ಧಾರ್ಮಿಕ ಕೇಂದ್ರ, ಸಿನಿಮಾ ಮಂದಿರ ಮುಂತಾದವು ಸದ್ಯಕ್ಕೆ ತೆರೆಯುವ ಸಾಧ್ಯತೆಯಿಲ್ಲ ಎಂಬುವುದು ಖಚಿತವಾಗಿದೆ. ಈ ನಡುವೆ, ರಾಜ್ಯದ ಇತರ ಭಾಗಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಜೂನ್ ಹದಿನಾಲ್ಕರಿಂದ ಅಥವಾ ಅದಕ್ಕಿಂತ ಮುನ್ನ ಆರಂಭವಾದರೂ, ಸೋಂಕು ಹೆಚ್ಚಿರುವ ಐದು ಜಿಲ್ಲೆಗಳಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆಯಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡುವ ನಿರ್ಧಾರ ನಡೆಸಿಕೊಳ್ಳಲಾಗಿದ್ದು ಆ 5 ಜಿಲ್ಲೆಗಳು ಯಾವುದೆಂಬುವುದು ಕುತೂಹಲ ಕೆರಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸೋಂಕಿನ ಇಳಿಕೆ ಪ್ರಮಾಣ ನಿರೀಕ್ಷಿಸಿದ ರೀತಿಯಲ್ಲಿ ಕಮ್ಮಿಯಾಗುತ್ತಿಲ್ಲ. ಜಿಲ್ಲೆಯಲ್ಲಿ ಜೂನ್ ಎಂಟರಂದು 525 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,045 ಇದೆ. ಪಾಸಿಟಿವಿಟಿ 20 ರ ಸನಿಹದಲ್ಲಿದೆ. ಹಾಗಾಗಿ, ದಕ್ಷಿಣ ಕನ್ನಡ ಸಂಪೂರ್ಣ ಅನ್ ಲಾಕ್ ಆಗುವುದು ಖಚಿತವಲ್ಲ. ಜಿಲ್ಲಾಧಿಕಾರಿಗಳು ಅನ್‌ಲಾಕ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಉಳಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ 703 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು,ಹಾಸನ, ತುಮಕೂರು ಜಿಲ್ಲೆಗಳಲ್ಲೂ ಹೊಸ ಪ್ರಕರಣಗಳು ಹೆಚ್ಚುತ್ತಿದೆ.14 ರ ನಂತರವೂ ಲಾಕ್ ಆಗುವ ಜಿಲ್ಲೆಗಳು ಯಾವುವು, ಯಾವ ರೀತಿಯ ಕಠಿಣ ಕ್ರಮಗಳನ್ನು ಸರ್ಕಾರ ಪಾಲಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಒಂದೊಮ್ಮೆ ಜೂನ್ 14 ನೇ ತಾರೀಕಿನಂದು ರಾಜ್ಯದ ಹಲವು ಕಡೆ ಲಾಕ್ ಡೌನ್ ಸಡಿಲಿಸಿದರು ಕೂಡಾ, ಮುಂದಕ್ಕೆ ಮತ್ತಷ್ಟು ಪಾಸಿಟಿವಿಟಿ ರೇಟ್ ಕಡಿಮೆಯಾಗುವ ತನಕ ವೀಕೆಂಡ್ ಕರ್ಫ್ಯೂ ಮುಂತಾದವುಗಳು ಜಾರಿಗೆ ಬರುವ ಸಾಧ್ಯತೆ ಇದೆ.