ದೇವಚಳ್ಳ ಗ್ರಾಮದಲ್ಲಿ ಕೊರೋನ ಸ್ಫೋಟ ಒಂದೇ ಕಾಲೋನಿಯ 27 ಮಂದಿಗೆ ಪಾಸಿಟಿವ್ ತಹಶೀಲ್ದಾರ್ ಮನವೊಲಿಕೆಯ ಬಳಿಕ ಪಂಜದ ಕೋವಿಡ್ ಸೆಂಟರ್ ಗೆ ದಾಖಲಾದ ಸೋಂಕಿತರು

ಸುಳ್ಯ ತಾಲೂಕಿನ    ದೇವಚಳ್ಳ ಗ್ರಾಮದ ದೇವ ಕಾಲೋನಿಯಲ್ಲಿ ಕೊರೋನಾ ಅಟ್ಟಹಾಸ ಮೆರೆದಿದ್ದು  ಕಾಲೋನಿಯ ಬರೋಬ್ಬರಿ 27 ಮಂದಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ತಿಳಿದುಬಂದಿದೆ.ಒಟ್ಟು 22 ಮಂದಿಯನ್ನು ಕೋವಿಡ್ ಸೆಂಟರ್ ಗೆ ದಾಖಲಿಸಲಾಗಿದ್ದು ಉಳಿದ 5 ಜನರಿಗೆ ಕಾಲೋನಿಯಲ್ಲಿ ಪ್ರತ್ಯೇಕ ಮನೆಯ ವ್ಯವಸ್ಥೆ ಮಾಡಲಾಗಿದೆ.

ದೇವ ಕಾಲೋನಿಯಲ್ಲಿ ಕೆಲವರು ಜ್ವರದಿಂದ ಬಳಲುತ್ತಿರುವ ಮಾಹಿತಿ ತಿಳಿದ ಆರೋಗ್ಯ ಕಾರ್ಯಕರ್ತೆಯರು ಮತ್ತು ಪಂಚಾಯತ್ ಅಧಿಕಾರಿಗಳು ಕಾಲೋನಿಗೆ ವೈದ್ಯರನ್ನು ಕರೆಸಿ ಪರೀಕ್ಷೆ ನಡೆಸಿದರು. ಮೊದಲ ದಿನ 51 ಮಂದಿಗೆ ಕೊರೋನಾ ಪರೀಕ್ಷೆ ನಡೆಸಿ, ಉಳಿದವರನ್ನು ಮರುದಿನ ಪರೀಕ್ಷೆ ನಡೆಸಲಾಯಿತು. ಅದರಲ್ಲಿ ಒಟ್ಟು 27 ಮಂದಿಗೆ ಕೊರೋನ ಸೋಂಕು ತಗುಲಿರುವ ಬಗ್ಗೆ ವರದಿ ಬಂತು. ಹೀಗಾಗಿ ಸೊಂಕೀತರನ್ನು ಪಂಜದ ಕೋವಿಡ್ ಸೆಂಟರ್ ಗೆ ದಾಖಲಿಸುವಲ್ಲಿ ಆಶಾಕಾರ್ಯಕರ್ತೆಯರು, ಪಂಚಾಯತ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಈ ನಡುವೆ ಕೋವಿಡ್ ಸೆಂಟರ್ ಗೆ ದಾಖಲಾಗಲು ಒಪ್ಪದ ಸೋಂಕಿತರು, ಹೋಂ ಇಸೋಲೇಷನ್ ನಲ್ಲಿರಲು ಹಠ ಹಿಡಿದರು. ಆ ಬಳಿಕ ಸುಳ್ಯ ತಹಶೀಲ್ದಾರ್ ಕು|ಅನಿತಾ ಲಕ್ಷ್ಮಿ ಹಾಗೂ ಸುಬ್ರಹ್ಮಣ್ಯ ಎಸ್. ಐ. ಓಮನ ಸ್ಥಳಕ್ಕೆ ತೆರಳಿ ಮನವೊಲಿಸಿ ಪಂಜದ ಕೋವಿಡ್ ಸೆಂಟರ್ ಗೆ ದಾಖಲಿಸಿದರು.27 ಮಂದಿಯಲ್ಲಿ ಇಬ್ಬರು ಮಕ್ಕಳು, ಓರ್ವ ಅಂಧ ಹಾಗೂ ಇನ್ನಿಬ್ಬರು ಅನಾರೋಗ್ಯದಿಂದಿರುವ ಕಾರಣ ಅವರನ್ನು ಅದೇ ಕಾಲೋನಿಯ ಖಾಲಿ ಮನೆಯಲ್ಲಿ ಇರುವಂತೆ ಸೂಚಿಸಿದರು. ಉಳಿದ 22 ಮಂದಿಯನ್ನು ಪಂಜದ ಕೋವಿಡ್ ಸೆಂಟರ್ ಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.

Leave A Reply

Your email address will not be published.