ಬೀದಿ ಬದಿ ವ್ಯಾಪಾರಿಗಳಿಗೆ ಇಂದು ತಲಾ 2000 ರೂ. ಪ್ಯಾಕೇಜ್ ಹಣ ಬಿಡುಗಡೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನೋಂದಾಯಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್, 2ನೇ ಅಲೆಯ ಪರಿಹಾರ ಪ್ಯಾಕೇಜ್ನಡಿ ಘೋಷಿಸಿದ ತಲಾ ಎರಡು ಸಾವಿರ ರೂ.ಗಳ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನೋಂದಾಯಿಸಿರುವ ಬೀದಿ ಬದಿ ವ್ಯಾಪಾರಿಗಳಿಗೆ ಈ ಸೌಲಭ್ಯ ದೊರೆತಿದೆ.
ನಗರ ಸ್ಥಳೀಯ ಸಂಸ್ಥೆಗಳಿಂದ ಸಮೀಕ್ಷೆಯ ಮೂಲಕ 2,16,439 ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸಲಾಗಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ಜೀವನೋಪಾಯ ನಿರ್ವಹಣೆಗೆ ಸಂಕಷ್ಟಕ್ಕೊಳಗಾದ ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಬೀದಿ ವ್ಯಾಪಾರಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಪ್ರತಿ ಬೀದಿಬದಿ ವ್ಯಾಪಾರಿಗಳಿಗೆ ರೂ. 10,000/- ಗಳ ವರೆಗೆ ಬ್ಯಾಂಕ್ ಮೂಲಕ ಕಿರುಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಈವರೆವಿಗೂ ಯೋಜನೆಯಡಿ ರೂ. 107.92 ಕೋಟಿಗಳಷ್ಟು ಸಾಲವನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್-19ರ 2ನೇ ಅಲೆಯ ಸಂದರ್ಭದಲ್ಲಿ ವಿಧಿಸಲಾದ ನಿರ್ಬಂಧಗಳಿಂದ ಸಂಕಷ್ಟಕ್ಕೊಳಗಾದ ಬೀದಿಬದಿ ವ್ಯಾಪಾರಿಗಳಿಗೆ ದಿನಾಂಕ: 19.05.2021 ರಂದು ಸರ್ಕಾರದಿಂದ ವಿಶೇಷ ಪ್ಯಾಕೇಜ್ನಡಿ ತಲಾ 2,000 ರೂ. ಆರ್ಥಿಕ ನೆರವನ್ನು ಘೋಷಿಸಲಾಗಿತ್ತು. ಅದರಂತೆ, 2,16,439 ಫಲಾನುಭವಿಗಳ ಪೈಕಿ ಆಧಾರ ಜೋಡಣೆಯಾಗಿರುವ 1,91,684 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ತಲಾ ರೂ. 2,000/- ರಂತೆ ಒಟ್ಟು ಸಹಾಯಧನ ರೂ. 38.33 ಕೋಟಿಗಳನ್ನು ವರ್ಗಾಯಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಉಳಿದಂತೆ, ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಆಗದೇ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯನ್ನು ಮಾಡಿ, ಸಹಾಯಧನವನ್ನು ತ್ವರಿತವಾಗಿ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು. ಈ ಸಹಾಯಧನ ಪಡೆದುಕೊಳ್ಳಲು ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಈ ಪ್ಯಾಕೇಜ್ನಡಿ ಬಿಡುಗಡೆ ಮಾಡಿರುವ ಸಹಾಯಧನವನ್ನು ಬೀದಿಬದಿ ವ್ಯಾಪಾರಿಗಳ ಯಾವುದೇ ಸಾಲಕ್ಕೆ ಸರಿದೂಗಿಸಬಾರದೆಂದು, ಈಗಾಗಲೇ ಸಂಬಂಧಿಸಿದ ಬ್ಯಾಂಕಿನವರಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಎರಡನೇ ಅಲೆ ನಮ್ಮನ್ನು ತೀವ್ರವಾಗಿ ಬಾಧಿಸಿದೆ. ಇಂತಹ ಕಠಿಣ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ವಿವಿಧ ವಲಯಗಳ ಕಾರ್ಮಿಕರು, ರೈತರು, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರ್ಚಕರು ಮತ್ತಿತರರಿಗೆ ಸರ್ಕಾರ 1,700 ಕೋಟಿ ರೂ. ಗಳಿಗೂ ಹೆಚ್ಚಿನ ಧನ ಸಹಾಯ ಘೋಷಿಸಿದ್ದು, ಈಗಾಗಲೇ ವಿವಿಧ ವರ್ಗದ ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಮೂಲಕ ಧನ ಸಹಾಯ ಮಾಡಲಾಗಿದೆ. ಇಂದು ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಪ್ಯಾಕೇಜ್ ಘೋಷಣೆಯಾದ ಇತರ ವರ್ಗಗಳಿಗೂ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳು ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಅವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಬೆಂಗಳೂರು ಮಹಾನಗರದಲ್ಲಿ ಈ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು, ಬೀದಿ ಬದಿ ವ್ಯಾಪಾರಿಗಳಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. 2.14 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಿ ತಲಾ ಎರಡು ಸಾವಿರ ರೂ. ನೆರವನ್ನು ಅರ್ಜಿ ಪಡೆಯದೇ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.