ನೆಸ್ಲೆಯ ಶೇ. 60 ಆಹಾರ ಪದಾರ್ಥಗಳು ಹಾನಿಕಾರಕ| ಮ್ಯಾಗಿ ತಯಾರಕ ಸಂಸ್ಥೆಯ ತಪ್ಪೊಪ್ಪಿಗೆ
ನವದೆಹಲಿ : ನೆಸ್ಲೆ(Nestle) ಕಂಪನಿಯು ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು ನೆಸ್ಲೆ ಉತ್ಪನ್ನಗಳಲ್ಲಿ 60 ಶೇ. ಉತ್ಪನ್ನಗಳು ಆರೋಗ್ಯಕರವಾಗಿಲ್ಲ. ಅಂದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬ ವರದಿ ಬಹಿರಂಗವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದು ಯಾರೋ ಮಾಡಿರುವ ಆರೋಪ ಅಲ್ಲ. ಬದಲಿಗೆ, ನೆಸ್ಲೆ ತನ್ನ ವರದಿಯಲ್ಲಿಯೇ ಈ ವಿಚಾರವನ್ನು ಬಹಿರಂಗಪಡಿಸಿದೆ.
ಜೊತೆಗೆ ತಾನು ಎಷ್ಟೇ ಪ್ರಯತ್ನ ಪಟ್ಟರೂ, ಕೆಲವೊಂದು ಆಹಾರ ಪದಾರ್ಥಗಳು ಆರೋಗ್ಯಕರವಾಗುವುದಿಲ್ಲ ಎಂದೂ ಒಪ್ಪಿಕೊಂಡಿರುವುದಾಗಿ ವರದಿಯಲ್ಲಿದೆ.
ವಿಶ್ವದ ಅತಿ ದೊಡ್ಡ ಆಹಾರ ಸಂಸ್ಥೆಯಾದ ನೆಸ್ಲೆ ಉತ್ಪನ್ನಗಳ ಸುರಕ್ಷತಾ ಮಟ್ಟವನ್ನು ಬಹಿರಂಗಪಡಿಸಿರುವ ಫೈನಾನ್ಷಿಯಲ್ ಟೈಮ್ಸ್, 2021ರಲ್ಲಿ ನಡೆಸಲಾದ ಆಹಾರ ಪದಾರ್ಥಗಳ ಪರೀಕ್ಷೆಯಲ್ಲಿ ಕೇವಲ 37 ಶೇ. ಆಹಾರ ಪದಾರ್ಥಗಳಿಗೆ ಮಾತ್ರ 3.5 ರೇಟಿಂಗ್ ಸಿಕ್ಕಿದೆ ಎಂದು ತಿಳಿಸಿದೆ.
ಸಹಜವಾಗಿ 3.5 ಅಥವಾ ಅದಕ್ಕೂ ಹೆಚ್ಚಿನ ರೇಟಿಂಗ್ ಸಿಕ್ಕರೆ, ಆಹಾರ ಆರೋಗ್ಯಕರವಾಗಿದೆ ಎಂದರ್ಥ. 5 ಸ್ಟಾರ್ ಗಳ ಶ್ರೇಣಿಯಲ್ಲಿ ಆಹಾರ ಪದಾರ್ಥಗಳಿಗೆ ರೇಟಿಂಗ್ ನೀಡಲಾಗುತ್ತದೆ. ಹಾಗಾಗಿ ಪ್ರಾಣಿಗಳ ಆಹಾರ ಹಾಗೂ ವಿಶೇಷ ವೈದ್ಯಕೀಯ ನ್ಯೂಟ್ರಿಷನ್ ಆಹಾರ ಹೊರತುಪಡಿಸಿ ನೆಸ್ಲೆ ತಯಾರಿಸುವ ಶೇ. 37 ಆಹಾರ ಪದಾರ್ಥಗಳು ಮಾತ್ರವೇ 3.5 ರೇಟಿಂಗ್ ಪಡೆದುಕೊಂಡಿದೆ ಎಂದಾದರೆ, ಉಳಿದ ಆಹಾರ ಶೇ.60 ಆಹಾರ ಪದಾರ್ಥಗಳು ಆರೋಗ್ಯಕರ ಎನಿಸಿಕೊಳ್ಳಲು ಬೇಕಿರುವ ಮಾನದಂಡಗಳ ಪೂರೈಸಿಲ್ಲ ಎಂದರ್ಥ. ಜೊತೆಗೆ ನೆಸ್ಲೆ ತಯಾರಿಸುವ ಶೇ. 90 ಪಾನೀಯಗಳು ಶುದ್ಧ ಕಾಫಿಯಲ್ಲ ಎಂದು ಸಹ ಪ್ರಮಾಣವಾಗಿದೆ.