ಕೊರೋನ ಚಿಕಿತ್ಸೆ ಪಡೆದು ಮನೆಗೆ ವಾಪಸಾಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್
ಅಸ್ಸಾಂನ ಚರೈದಿಯೊ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಮನುಷ್ಯನಲ್ಲಿ ಅಡಗಿರುವ ಮೂಲಗುಣ ಕ್ರೌರ್ಯ ಯಾವ ಸನ್ನಿವೇಶದಲ್ಲೂ ಬದಲಾಗದು ಎಂಬುದಕ್ಕೆ ನಿದರ್ಶನವಾಗಿದೆ.
ಕೊರೋನ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ತನ್ನ ಮಗಳ ಜೊತೆ ನಡೆದುಕೊಂಡೇ ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ದಾರಿ ಮಧ್ಯೆ ದುಷ್ಕರ್ಮಿಗಳು ಮಗಳ ಎದುರೇ ಈ ಬರ್ಬರ ಕೃತ್ಯ ಎಸಗಿದ್ದಾರೆ.
ಬೊರ್ಹಾತ್ ನಾಗರಮತಿ ಪ್ರದೇಶದ ಚಹ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಪತಿ, ಮಗಳು ಕೆಲವು ದಿನಗಳ ಹಿಂದೆ ಕೊರೋನ ಸೋಂಕು ತಗುಲಿ ಸಾಪೇಕಾತಿ ಮಾಡೆಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆಯ ಪತಿ ಮೇ 27ರಂದು ಆಸ್ಪತ್ರೆಯಿಂದ ಮರಳಿದ್ದರು. ಬಳಿಕ ಮಹಿಳೆ ಮತ್ತು ಮಗಳು ಕೂಡ ಆಸ್ಪತ್ರೆಯಿಂದ ಬಿಡುಗಡೆಯಾದರು.
ಆದರೆ ಅಸ್ಸಾಂ ನಲ್ಲಿ ಕರ್ಫ್ಯೂ ಜಾರಿಯಾಗಿರುವ ಕಾರಣ ಆಸ್ಪತ್ರೆಯಿಂದ ಮಹಿಳೆ ಮತ್ತು ಆಕೆಯ ಮಗಳಿಗೆ 25 ಕಿ.ಮೀ ದೂರವಿರುವ ಮನೆಗೆ ಮರಳಲು ಯಾವುದೇ ವಾಹನ ವ್ಯವಸ್ಥೆ ಇರಲಿಲ್ಲ. ಮಹಿಳೆ ಆಸ್ಪತ್ರೆಯವರ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದರು. ಆದರೆ ಆಸ್ಪತ್ರೆಯವರು ಮಹಿಳೆ ಮನವಿಗೆ ಸ್ಪಂದಿಸಿಲ್ಲ. ಸಂತ್ರಸ್ತೆ ಮಗಳ ಜೊತೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ವೇಳೆ ಯುವಕರ ಗುಂಪೊಂದು ಮಹಿಳೆಯ ಬೆನ್ನತ್ತಿ ಆಕೆಯ ಮಗಳ ಮುಂದೆಯೇ ಬರ್ಬರವಾಗಿ ಅತ್ಯಾಚಾರಗೈದಿದೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಿದ ಸಂತ್ರಸ್ತೆಯ ಮಗಳು ಹತ್ತಿರದ ಗ್ರಾಮಸ್ಥರಿಗೆ ವಿಷಯವನ್ನು ತಿಳಿಸಿದ್ದಾಳೆ. ಗ್ರಾಮಸ್ಥರು ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಗ್ರಾಮಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಪೊಲೀಸರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಮಹಿಳೆಯು ಚಿಂತಾಜನಕ ಸ್ಥಿತಿ ತಲುಪಿದ್ದರು. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ಪಡೆದು ಚೇತರಿಸಿಕೊಂಡ ಮಹಿಳೆಯ ಮನವಿಗೆ ಸ್ಪಂದಿಸದೇ ಆ್ಯಂಬುಲೆನ್ಸ್ ಅಥವಾ ಯಾವುದೇ ವಾಹನ ವ್ಯವಸ್ಥೆ ಕಲ್ಪಿಸದ ಆಸ್ಪತ್ರೆಯ ಕ್ರೌರ್ಯವೇ ದುರಂತಕ್ಕೆ ಕಾರಣವೆಂದು ಗ್ರಾಮಸ್ಥರು ದೂರಿದ್ದಾರೆ. ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದ ಬಡ ರೋಗಿಗಳನ್ನು ಮನೆಗೆ ತಲುಪಿಸುವುದು ಕೂಡ ಆಸ್ಪತ್ರೆಯ ಕರ್ತವ್ಯ ಎಂಬುದನ್ನು ಮರೆತಂತಿದೆ.
ಇನ್ನು ಮುಂದೆಯಾದರೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸರ್ಕಾರಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.