ಪೌರತ್ವಕ್ಕಾಗಿ ಅಪ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದ ನಿರಾಶ್ರಿತರಿಂದ ಕೇಂದ್ರ ಗೃಹ ಇಲಾಖೆಯಿಂದ ಅರ್ಜಿ ಆಹ್ವಾನ | ಮುಸ್ಲಿಮೇತರ ನಿರಾಶ್ರಿತರಿಗೆ ಮಾತ್ರ ಅವಕಾಶ !

ಗುಜರಾತ್, ರಾಜಸ್ಥಾನ, ಛತ್ತೀಸ್ ಘಡ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಅಲ್ಲಿನ ಒಟ್ಟು 13 ಜಿಲ್ಲೆಗಳಲ್ಲಿ ವಾಸಿಸುತ್ತಿರುವ, ಆದರೆ ಅಪ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಿಂದೂ, ಸಿಖ್, ಜೈನ್ ಮತ್ತು ಬೌದ್ದರಂತಹ ನಿರಾಶ್ರಿತರಿಂದ ಭಾರತೀಯ ಪೌರತ್ವಕ್ಕಾಗಿ ಕೇಂದ್ರ ಸರ್ಕಾರ ಅರ್ಜಿಯನ್ನು ಆಹ್ವಾನಿಸಿದೆ. ಆದರೆ ಇದರಿಂದ ಆ ರಾಷ್ಟ್ರಗಳಿಂದ ಬಂದ ಮುಸ್ಲಿಮರನ್ನು ಹೊರಗಿರಿಸಲಾಗಿದೆ.

ಪೌರತ್ವ ಕಾಯ್ದೆ 1955 ಮತ್ತು 2009 ರಲ್ಲಿ ಕಾನೂನಿನಡಿಯಲ್ಲಿ ರೂಪಿಸಲಾದ ನಿಯಮಗಳ ಅಡಿಯಲ್ಲಿ ಆದೇಶವನ್ನು ತಕ್ಷಣ ಜಾರಿಗೆ ತರಲು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಹೊಸ ಆದೇಶವು 2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಅದು ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, 2014, ಡಿಸೆಂಬರ್ 31ರವರೆಗೂ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದಿಂದ ಬಂದಂತಹ ಹಿಂದೂ, ಸಿಖ್, ಜೈನ್, ಬೌದ್ದರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು.

ಪ್ರಸ್ತುತ ಗುಜರಾತ್ ರಾಜ್ಯದ ಮೊರ್ಬಿ, ರಾಜ್ ಕೋಟ್, ಪಠಾಣ್, ವಡೋದರಾ, ದುರ್ಗ್ ,ಛತ್ತೀಸ್ ಗಢದ ಬಾಲೋಡಬಜಾರ್, ಜಾಲೊರ್, ಉದಯ್ ಪುರ, ಪಾಲಿ,ಬರ್ಮೆರ್, ಮತ್ತು ರಾಜಸ್ಥಾನದ ಶಿರೊಹಿ, ಹರಿಯಾಣದ ಪರಿದಾಬಾದ್, ಪಂಜಾಬ್ ನ ಜಲಂಧರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ನಿರಾಶ್ರಿತರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

2019 ರಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿನ ನಿಯಮಗಳನ್ನು ಸರ್ಕಾರ ಇನ್ನೂ ರೂಪಿಸಬೇಕಾಗಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗ, ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆದವು. ದೆಹಲಿಯಲ್ಲಿ 2020ರ ಆರಂಭದಲ್ಲಿ ಹಿಂಸಾಚಾರವೇ ನಡೆದಿತ್ತು.

Leave A Reply

Your email address will not be published.