ಸಿಬ್ಬಂದಿಗಳ ಕೊರತೆಯಿಂದಾಗಿ ಸಾಮಾಜಿಕ ಅಂತರವಿಲ್ಲದೆ ಲಸಿಕೆಗಾಗಿ ಕಾಯುತ್ತಿರುವ ಜನ..ಇದೆಲ್ಲವೂ ಕಡಬದ ಸಮುದಾಯ ಅರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆ…ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ ಜನತೆ
ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಅರಿವು ಮೂಡಿಸಲು, ಕೋವಿಡ್ ಗಂಭೀರತೆಯನ್ನು ತಿಳಿಸಲು ಸಿಬ್ಬಂದಿಗಳಿಲ್ಲದೆ ಜನ ಸಂದಣಿ, ನೂಕುನುಗ್ಗಲು ಕಂಡುಬಂತು.
ತಾಲೂಕಿನ ಕೆಲ ಗ್ರಾಮಗಳಿಂದ ಕೊರೋನಾ ವ್ಯಾಕ್ಸಿನ್ ಪಡೆಯಲೆಂದು ಜನರು ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದು, ಆಸ್ಪತ್ರೆ ಮುಂಭಾಗ ನಿಲ್ಲಲು ಜಾಗವಿಲ್ಲದೆ ಪಕ್ಕದ ಕಟ್ಟಡದ ಸಮೀಪ ಬಿಸಿಲಿನಲ್ಲಿಯೇ ಜನ ಕಾಯುತ್ತಿರುವ ದೃಶ್ಯ ಕಂಡುಬಂತು.
ತೀರಾ ಕಡಿಮೆ ಸಿಬ್ಬಂದಿಗಳಿರುವ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ತಮ್ಮ ತಮ್ಮ ಕೆಲಸಗಳಲ್ಲಿ ಕಾರ್ಯನಿರರಾಗಿದ್ದರು.ಇಂದು ಲಸಿಕೆಪಡೆಯಲು ೨೦೦ ಟೋಕನ್ ನೀಡಿದ್ದು ಕೆಲವರು ಟೋಕನ್ ಸಿಗದೆ ಸಮರ್ಪಕ ಮಾಹಿತಿಯೂ ಸಿಗದೆ ಒದ್ದಾಡುತ್ತಿರುವುದು ಕಂಡು ಬಂತು.
ಇದೆಲ್ಲದರ ನಡುವೆ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಅರೆಬರೇ ಮಾಸ್ಕ್ ತೊಟ್ಟು ಲಸಿಕೆ ಸಿಗಬಹುದೆಂಬ ನಿರೀಕ್ಷೆಯಿಂದ ಸಿಬ್ಬಂದಿಗಳನ್ನೇ ಜನ ಹುಡುಕುತ್ತಿರುವ ದೃಶ್ಯ ಕಂಡುಬಂತು.
ಈ ಬಗ್ಗೆ ಮಾಹಿತಿ ನೀಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚಿತ್ರ ರಾವ್ ಅವರು “ನಾವು ಇನ್ನೂರು ಮಂದಿಗೆ ಟೋಕನ್ ವ್ಯವಸ್ಥೆ ಮಾಡಿದ್ದೇವೆ. ಕೆಲವರು ಸಮರ್ಪಕ ಮಾಹಿತಿ ಇಲ್ಲದೆ ಆಸ್ಪತ್ರೆಗೆ ಆಗಮಿಸಿದ್ದು ಇಲಾಖೆಯ ನಿಯಾಮಾನುಸಾರ ಎಲ್ಲರಿಗೂ ಲಸಿಕೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ” ಎಂದರು.
ಒಟ್ಟಾರೆಯಾಗಿ ಸುಸಜ್ಜಿತ ಸಮುದಾಯ ಅರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಗೆ ಸದಾ ಪಾತ್ರವಾಗುತ್ತಿರುವ ಕಡಬದ ಸಮುದಾಯ ಅರೋಗ್ಯ ಕೇಂದ್ರಕ್ಕೆ ಇದೊಂದು ಕಪ್ಪುಚುಕ್ಕೆಯಾಗಿದೆ. ಈ ಬಗೆಗೆ ಜನಪ್ರತಿನಿಧಿಗಳು ಉತ್ತರಿಸುವರೇ. ಈ ರೀತಿಯ ಘಟನೆ ಮರುಕಳಿಸದಂತೆ ಅರೋಗ್ಯ ಇಲಾಖೆ ಹೆಚ್ಚಿನ ಗಮನಹರಿಸಬೇಕಾಗಿದೆ.