ಸೆಕ್ಯೂರಿಟಿ ಗಾರ್ಡ್ ನ ಕೈ-ಕಾಲು ಕಟ್ಟಿ ಸಾರಾಯಿ ಕಳ್ಳತನ | ಬರೋಬ್ಬರಿ ನಾಲ್ಕೂವರೆ ಲಕ್ಷ ರೂ. ಮೌಲ್ಯದ ಮದ್ಯ ಎಗರಿಸಿದ ಚಾಲಾಕಿ ಕುಡುಕರು

 

ಅಥಣಿ: ಮದ್ಯ ಸಿಗದೇ ಇರುವುದಕ್ಕಾಗಿ ಮದ್ಯದಂಗಡಿಯಿಂದ ಕಳ್ಳತನ ಮಾಡುವುದು, ಸ್ಯಾನಿಟೈಸರ್ ಕುಡಿಯುವುದು ಇಂತಹ ಹಲವಾರು ಘಟನೆಗಳು ನಡೆದಿವೆ. ಇದೇರೀತಿ ಮದ್ಯದ ಅಂಗಡಿಯ ಭದ್ರತೆಗಿದ್ದ ಸೆಕ್ಯೂರಿಟಿ ಗಾರ್ಡ್ ನ ಕೈ-ಕಾಲು ಕಟ್ಟಿ ಅಂಗಡಿಯಲ್ಲಿದ್ದ ಸುಮಾರು ನಾಲ್ಕೂವರೆ ಲಕ್ಷ ರೂ. ಮೌಲ್ಯದ ಮದ್ಯ ಕಳವು ಮಾಡಿದ ಘಟನೆ ಅಥಣಿಯಲ್ಲಿ ನಡೆದಿದೆ.

ಅಥಣಿ ಪಟ್ಟಣದ ಹೊರವಲಯದ ಕೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಮಾರ್ಗದಲ್ಲಿರುವ ವೆಂಕಟೇಶ್ವರ ವೈನ್ ಶಾಪ್ ನಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ.

ಗುರುವಾರ ತಡರಾತ್ರಿ ವೈನ್ ಶಾಪ್ ಗೆ ಬಂದ‌ ಇಬ್ಬರು ವ್ಯಕ್ತಿಗಳು ಸಾರಾಯಿ ಕೊಡುವಂತೆ ಸೆಕ್ಯೂರಿಟಿ ಗಾರ್ಡ್ ಗೆ ಕೇಳಿದ್ದಾರೆ. ಆದರೆ ಅಂಗಡಿ ಬೀಗ ಹಾಕಿದೆ, ಈಗ ಇಲ್ಲ, ನಾಳೆ ಬೆಳಗ್ಗೆ ಬನ್ನಿ ಎಂದಿದ್ದಕ್ಕೆ ವಾಪಸ್ಸು ಹೋಗಿದ್ದಾರೆ. ಅರ್ಧ ಗಂಟೆ ಬಿಟ್ಟು ಮತ್ತೆ ಐದಾರು ಜನ ದ್ವಿಚಕ್ರ ವಾಹನದ ಮೇಲೆ ಬಂದ‌ ಈ ಖದೀಮರು ವೈನ್ ಶಾಪ್ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಬಳಿಕ ಕೈ ಕಾಲು ಕಟ್ಟಿ ಗ್ಯಾಸ್ ವೆಲ್ಡಿಂಗ್ ಮಷೀನ್ ದಿಂದ ಬೀಗ ಕೊಯ್ದು ಒಳ ನುಗ್ಗಿ ಕಳ್ಳತನ ನಡೆಸಿದ್ದಾರೆ. ಈ ಕುರಿತು ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯತ್ತಿದೆ.

Leave A Reply

Your email address will not be published.