ಪಾಸಿಟೀವ್ ಬಂತು ಅಂತ ಮನೇಲಿ ಕೂತರೆ ನನ್ನ ತೋಟಕ್ಕೆ ನೀರು ಗೊಬ್ಬರ ನೀವು ಹೋಗಿ ಹಾಕ್ತೀರಾ | ಅಧಿಕಾರಿಗಳ ಜೊತೆಗೆ ರೈತನ ವಾದ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಮತ್ತು ಅಧಿಕಾರಿಗಳ ಮಧ್ಯೆ ತೀವ್ರ ವಾಗ್ವಾದ ನಡೆಸಿದ್ದು ಅದು ಕುತೂಹಲ ಮೂಡಿಸಿದೆ.

ಚಿಕ್ಕಮಗಳೂರು ತಾಲ್ಲೂಕಿನ ನೇರಡಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರು. ವರದಿ ಬರುವ ತನಕ ಸುರಕ್ಷತೆಯ ದೃಷ್ಟಿಯಿಂದ ಆತನಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಆ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ತಕ್ಷಣ ಆತನ ಮೊಬೈಲ್ ಗೆ ಪಾಸಿಟಿವ್ ಆದುದರ ಬಗ್ಗೆ ಮೆಸೇಜ್ ಕೂಡ ಕಳುಹಿಸಲಾಗಿತ್ತು. ಹೀಗಿದ್ದರೂ, ಆತ ಪಾಸಿಟಿವ್ ಬಂದಿದ್ದು ತಿಳಿದರೂ ಗ್ರಾಮದಲ್ಲಿ ಓಡಾಡಿಕೊಂಡು, ಮುಖ್ಯವಾಗಿ ತನ್ನ ಹೊಲ ತೋಟಗಳಿಗೆ ಹೋಗಿ ಬರುತ್ತಿದ್ದನು.

ಮರುದಿನ ಅಧಿಕಾರಿಗಳು ಆತನ ಯೋಗ-ಕ್ಷೇಮ ವಿಚಾರಿಸಲು ಮನೆಗೆ ಹೋದಾಗ ಆತ ಮನೆಯಲ್ಲಿ ಇರಲಿಲ್ಲ. ಅದೇ ವೇಳೆಗೆ ತೋಟದಿಂದ ಬಂದ ಆ ವ್ಯಕ್ತಿಗೆ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗ ಆ ವ್ಯಕ್ತಿ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾನೆ. ‘ ನಾನು ಸತ್ತರೆ ಸಾಯುತ್ತೇನೆ ಬಿಡಿ. ನಿಮಗೇನು? ನಾನು ಮನೆಯಲ್ಲಿದ್ದರೆ ನಮ್ಮ ತೋಟಕ್ಕೆ ಗೊಬ್ಬರ ನೀರು ನೀವು ಹಾಕುತ್ತೀರಾ ? ‘ಎಂದು ಕೊರೋನಾ ಸೋಂಕಿತ ವ್ಯಕ್ತಿ ಅಧಿಕಾರಿಗಳ ಮೇಲೆ ಪ್ರಶ್ನಿಸಿ ದರ್ಪ ತೋರಿದ ಘಟನೆ ನಡೆದಿದೆ.
ನಾನು ಹೊರಗಡೆ ಓಡಾಡ್ತೀನಿ. ಓಡಾಡದೆ ಹೋದರೆ ನನ್ನ ತೋಟದ ಕೆಲಸ ಯಾರು ಮಾಡ್ತಾರೆ ?! ನನ್ನ ನೀವ್ಯಾರು ಕೇಳಬೇಡಿ ಎಂದು ಅಧಿಕಾರಿಗಳ ಮೇಲೆ ಆ ರೈತ ತಿರುಗಿ ಬಿದ್ದಿದ್ದಾನೆ ಎನ್ನಲಾಗಿದೆ.

ಸದರಿ ವ್ಯಕ್ತಿಯ ಮನೆಯಲ್ಲಿ ಆತ ಸೇರಿದಂತೆ ಒಟ್ಟು ಮೂವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ವ್ಯಕ್ತಿಯ ಉಲ್ಟಾ ಮಾತು ಕೇಳಿದ ಅಧಿಕಾರಿಗಳು ಆತನ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆದರೆ ಈಗ ಪೊಲೀಸರು ಕೂಡಾ ಅಸಹಾಯಕರಾಗಿದ್ದಾರೆ. ಕಾರಣ ಈಗ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದರಿಂದ 14 ದಿನಗಳ ಬಳಿಕವಷ್ಟೆ ಆತನ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.