ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜನೆ | ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮಂಗಳೂರು: ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಾವೂರಿನ ಗ್ರಾಮದ ಶೋಭಾ ಎಂಬವರು ಮೇ 20ರಂದು ಮದುವೆಗೆ ಗ್ರಾಪಂನಿಂದ ಷರತ್ತುಬದ್ಧ ಅನುಮತಿ ಪಡೆದಿದ್ದರು. ಆದರೆ, ಮೇ 19ರಂದು ರಾತ್ರಿ ಅನುಮತಿ ಇಲ್ಲದೆ ಮೆಹಂದಿ ಕಾರ್ಯಕ್ರಮ ಆಯೋಜಿಸಿ ಧ್ವನಿವರ್ಧಕ ಬಳಸಿ ಯಾವುದೇ ರೀತಿಯ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ನೃತ್ಯ ಮಾಡುವ ಮೂಲಕ ಕೋವಿಡ್ 19 ನಿಯಮ ಉಲ್ಲಂಘಿಸಿದ್ದಾರೆ ಎಂದು ಪಾವೂರು ಗ್ರಾಪಂ ಪಿಡಿಒ ಸುಧಾರಾಣಿ ದೂರು ನೀಡಿದ್ದಾರೆ.
ಅದರಂತೆ ಕೊಣಾಜೆ ಪೊಲೀಸರು ಕರ್ನಾಟಕ ಎಪಿಡಮಿಕ್ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸರಳ ಮದುವೆಗೆ ಅನುಮತಿ ನೀಡಿದ್ದರೂ,ಈ ರೀತಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದು ಪ್ರಜ್ಞಾವಂತ ನಾಗರಿಕರ ಲಕ್ಷಣ ಅಲ್ಲವೇ ಅಲ್ಲ.ಇಷ್ಟು ಬೇಜವಾಬ್ದಾರಿತನ ತೋರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.