ಮೇ 31ಕ್ಕೆ ಕೇರಳಕ್ಕೆ, ಜೂನ್ 5 ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ | ಭಾರಿ ಮಳೆ ಬೀಳುವ ಸಾಧ್ಯತೆ
ನೈಋತ್ಯ ಮಾನ್ಸೂನ್ ಮಾರುತಗಳು ನೈಋತ್ಯ ಮತ್ತು ಪೂರ್ವಕೇಂದ್ರದ ಬಂಗಾಳ ಕೊಲ್ಲಿಯತ್ತ ಸಾಗಿದ್ದು, ಮೇ 31ರ ಹೊತ್ತಿಗೆ ಕೇರಳ ಪ್ರವೇಶ ಮಾಡಲಿದ್ದು, ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಈ ವರ್ಷ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಇತ್ತೀಚೆಗೆ ಸೃಷ್ಟಿಯಾದ 2 ಚಂಡಮಾರುತಗಳೇ ಮಾನ್ಸೂನ್ ಮಾರುತಗಳ ಈ ಚಲನೆಗೆ ಕಾರಣ ಎನ್ನಲಾಗಿದೆ. ಕಳೆದ ವಾರವಷ್ಟೇ ಟೌಕ್ಟೇ ಚಂಡಮಾರುತದಿಂದಾಗಿ ಸಾಕಷ್ಟು ರಾಜ್ಯಗಳು ನಷ್ಟ ಅನುಭವಿಸಿದ್ದವು. ಇದೀಗ ಅದರ ಬೆನ್ನಲ್ಲೇ ಯಾಸ್ ಚಂಡಮಾರುತ ಕೂಡ ಅಪ್ಪಳಿಸಿದೆ. ಹೀಗಾಗಿ ಮಾನ್ಸೂನ್ ಮಾರುತಗಳ ಚಲನೆಯಲ್ಲಿ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಮಾಲ್ಡೀವ್ಸ್-ಕೊಮೊರಿನ್ ಪ್ರದೇಶದ ಕೆಲವು ಭಾಗಗಳಲ್ಲಿ ಮಾನ್ಸೂನ್ ಈಗಾಗಲೇ ಪ್ರವೇಶಿಸಿದೆ. ಪಶ್ಚಿಮ ಬಂಗಾಳದ ನೈಋತ್ಯ ಮತ್ತು ಪೂರ್ವ ಕೇಂದ್ರ, ಆಗ್ನೇಯ ಕೊಲ್ಲಿಯ ಹೆಚ್ಚಿನ ಭಾಗ ಹಾಗೂ ಪಶ್ಚಿಮ ಕೇಂದ್ರ ಕೊಲ್ಲಿಯ ಕೆಲವು ಭಾಗಗಳಿಗೆ ಗುರುವಾರದ ವೇಳೆಗೆ ಮಾನ್ಸೂನ್ ಪ್ರವೇಶಿಸಿದೆ.
ರಾಜ್ಯದಲ್ಲಿ ರೈತರು ಸಹ ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.