ಕುಸ್ತಿಪಟು ಸಾಗರ್ ರಾಣಾ ಕೊಲೆ ವಿಡಿಯೋ ವೈರಲ್ ,ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಜೈಲು ಪಾಲು
ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ಕುಸ್ತಿಪಟು ಸಾಗರ್ ರಾಣ ಅವರ ಕೊಲೆ ಪ್ರಕರಣದಲ್ಲಿ 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಿರುವಾಗಲೇ ತನ್ನ ಸ್ನೇಹಿತರೊಂದಿಗೆ ಸೇರಿ ಸಾಗರ್ಗೆ ಥಳಿಸುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀವ್ರ ಥಳಿತಕ್ಕೆ ಒಳಗಾದ ಕುಸ್ತಿಪಟು ಸಾಗರ್, ಗಂಭೀರ ಗಾಯಗೊಂಡು ನೆಲದ ಮೇಲೆಯೇ ನರಳಾಡಿ ಪ್ರಾಣ ಬಿಟ್ಟಿರುವುದಾಗಿ ತಿಳಿದುಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ನನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದಾರೆ. ಸುಶೀಲ್ ಕುಮಾರ್ ಮತ್ತು ಆತನ ಸ್ನೇಹಿತರು ಮೇ 4ರಂದು ಸಾಗರ್ ಮತ್ತು ಆತನ ಸ್ನೇಹಿತರಿಬ್ಬರ ಮೇಲೆ ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಹಲ್ಲೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದರು. ಗಾಯಗೊಂಡ ಮೂವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾಗರ್ ಮೃತಪಟ್ಟಿದ್ದಾರೆ.
ಪೊಲೀಸ್ ಬಂಧನದಿಂದ ರಕ್ಷಿಸಿಕೊಳ್ಳಲು ಮೇ 18ರಂದು ಸುಶೀಲ್ ಕುಮಾರ್ ದೆಹಲಿ ಕೋರ್ಟ್ ಮೆಟ್ಟಲೇರಿದ್ದರು. ನನ್ನ ವಿರುದ್ಧದ ತನಿಖೆಯಲ್ಲಿ ಪಕ್ಷಪಾತವಾಗಿದೆ ಮತ್ತು ಸಂತ್ರಸ್ತನಿಗಾದ ಯಾವುದೇ ಗಾಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಸುಶೀಲ್ ವಾದಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತು. ಇದೀಗ ಬಂಧನಕ್ಕೆ ಒಳಗಾಗಿರುವ ಸುಶೀಲ್ ಕುಮಾರ್ ವಿಚಾರಣೆ ನಡೆಯುತ್ತಿದೆ.
ನಗರದಲ್ಲಿ ಕುಸ್ತಿ ಸಮುದಾಯವನ್ನು ಭಯಭೀತಗೊಳಿಸಲು ಈ ಘಟನೆಯ ವೀಡಿಯೋವನ್ನು ಸುಶೀಲ್ ಕುಮಾರ್ ತನ್ನ ಸ್ನೇಹಿತನ ಮೂಲಕ ರೆಕಾರ್ಡ್ ಮಾಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಂದಹಾಗೆ ಸುಶೀಲ್ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. ಇಷ್ಟು ಹೆಸರು ಮಾಡಿರುವ ಕುಸ್ತಿಪಟು ಈ ರೀತಿಯ ಕೃತ್ಯದಿಂದ ತನ್ನ ಹೆಸರನ್ನು ಕಳೆದುಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ತುಂಬಾ ಜನರಿಗೆ ಕುಸ್ತಿಪಟುವಾಗಿ ಆದರ್ಶವಾಗಬೇಕಾದವರು ಜೈಲು ಸೇರಿರುವುದು ವಿಪರ್ಯಾಸವೇ ಸರಿ.