ದುಬೈನಲ್ಲಿ ಉದ್ಯೋಗ ದೊರಕಿಸಿ ಕೊಡುವ ಭರವಸೆ | ಕೈ ಕೊಟ್ಟ ಏಜೆಂಟ್,ನೆರವಿಗೆ ನಿಂತ ವಿಪಿಎಸ್ ಹೆಲ್ತ್ ಕೇರ್ ಗ್ರೂಪ್ | ನರ್ಸ್ ಗಳಿಗೆ ಕೆಲಸ ನೀಡಿದ ದುಬೈ ಆಸ್ಪತ್ರೆ ಸಮೂಹ

ದುಬೈನಲ್ಲಿ ನರ್ಸ್ ಉದ್ಯೋಗ ದೊರಕುವ ಭರವಸೆಯಿಂದ ದುಬೈಗೆ ಬಂದಿಳಿದು ಉದ್ಯೋಗವಿಲ್ಲದೆ ಯಾತನೆ ಅನುಭವಿಸುತ್ತಿದ್ದ ಕೇರಳದ 90 ನರ್ಸ್ ಗಳಿಗೆ ಯುಎಇಯ ಪ್ರಮುಖ ವೈದ್ಯಕೀಯ ಸಂಸ್ಥೆಯೊಂದು ಕೆಲಸ ನೀಡಿದೆ.

ಕೇರಳದ ನರ್ಸ್ ಗಳು ಕಳೆದ ವರ್ಷದ ಅಕ್ಟೋಬರ್‌ ನಿಂದ ಯುಎಇಗೆ ತಂಡಗಳಲ್ಲಿ ಆಗಮಿಸುತ್ತಿದ್ದಾರೆ. ಆದರೆ, ಅವರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ್ದ ಏಜೆಂಟ್‌‌ಗಳು ಕೆಲಸ ನೀಡದೆ ವಂಚಿಸಿದ್ದರಿಂದ ನರ್ಸ್‌ಗಳು ಸಂಕಷ್ಟಕ್ಕೆ ಸಿಲುಕಿದ್ದರು.

ಪುರುಷ ಮತ್ತು ಮಹಿಳಾ ನರ್ಸ್‌ಗಳಿಗೆ ಯುಎಇಯ ಕೋವಿಡ್-19 ಲಸಿಕೆ ಮತ್ತು ಪರೀಕ್ಷೆ ಕೇಂದ್ರಗಳಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದಕ್ಕಾಗಿ ಅವರು ಏಜೆಂಟರಿಗೆ 10,000 ದಿರ್ಹಮ್ (ಸುಮಾರು 2 ಲಕ್ಷ ರೂಪಾಯಿ) ಪಾವತಿಸಿದ್ದರು.

ಆದರೆ, ಯುಎಇಗೆ ಬಂದ ಬಳಿಕ ಅವರಿಗೆ ಕೆಲಸ ನಿರಾಕರಿಸಲಾಗಿತ್ತು.

ಈ ವಿಚಾರ ಅರಿತುಕೊಂಡ ದುಬೈನ ಪ್ರಮುಖ ಆಸ್ಪತ್ರೆಗಳು ನರ್ಸ‌ಗಳಿಗೆ ಕೆಲಸ ನೀಡಲು ಮುಂದೆ ಬಂದಿದ್ದು, ಅವರ ಪೈಕಿ ಹೆಚ್ಚಿನವರ ಸಂಕಷ್ಟ ಈ ಮೂಲಕ ಕೊನೆಗೊಂಡಿದೆ.

41 ನರ್ಸ್ ಗಳು ಈಗಾಗಲೇ ವೈದ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಆರಂಭಿಸಿದ್ದಾರೆ ಎಂದು ವಿಪಿಎಸ್ ಹೆಲ್ತ್ ಕೇರ್ ಗ್ರೂಪ್ ನ ಸ್ಥಾಪಕ, ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ. ಶಂಶೀರ್ ವಯಾಲಿಲ್ ತಿಳಿಸಿದ್ದು,ಇನ್ನೂ ಸುಮಾರು 49 ಮಂದಿ ಶೀಘ್ರದಲ್ಲೇ ಕೆಲಸಕ್ಕೆ ಸೇರಿಕೊಳ್ಳಲಿದ್ದು,ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಅರ್ಹ ನರ್ಸ್‌ಗಳನ್ನು ವಿಶೇಷವಾಗಿ ಪರಿಗಣಿಸಿ ಕೆಲಸ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ‌.

Leave A Reply

Your email address will not be published.