ಅನ್‌ಲೋಡ್ ಮಾಡುವ ವೇಳೆ ಅಚಾನಕ್ಕಾಗಿ ಗೋಣಿಚೀಲ ಬಿದ್ದು ಚಾಲಕ ಮೃತ್ಯು

ಅನ್‌ಲೋಡ್ ಮಾಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಮಣಿಗಳು ತುಂಬಿದ್ದ ಗೋಣಿಚೀಲಗಳು ಮೈಮೇಲೆ ಬಿದ್ದ ಕಾರಣ ಲಾರಿ ಚಾಲಕ ಮೃತಪಟ್ಟ ಘಟನೆ ನಗರದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

 

ಮೃತಪಟ್ಟವರನ್ನು ಮುಹಮ್ಮದ್ ಮನ್ಸೂರ್ ಎಂದು ಗುರುತಿಸಲಾಗಿದೆ.

ಲಾರಿ ಚಾಲಕ ಹಾಗೂ ಮಾಲಕರಾಗಿದ್ದ ಮುಹಮ್ಮದ್ ಮನ್ಸೂರ್ ಮತ್ತು ಲಾರಿಯ ನಿರ್ವಾಹಕ ಸಿನಾನ್ ಅಫ್ರಿದ್ ಎಂಬವರು ಪ್ಲಾಸ್ಟಿಕ್ ಮಣಿಗಳ ಚೀಲಗಳನ್ನು ಎಂಆರ್‌ಪಿಎಲ್‌ನಿಂದ ಲೋಡ್ ಮಾಡಿಕೊಂಡು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ರೈಟ್ ಪ್ಯಾಕೇಜಿಂಗ್ ಕಂಪನಿ ಯಾರ್ಡ್‌ಗೆ ತೆರಳಿದ್ದರು.ರಾತ್ರಿ ಸುಮಾರು 7 ಗಂಟೆಗೆ ಲಾರಿ ನಿಲ್ಲಿಸಿ ಅನ್‌ಲೋಡ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದರು. ಸಿನಾನ್ ಅಫ್ರಿದ್ ಲಾರಿಯ ಕ್ಯಾಬಿನ್ ಮೇಲೆ ಹತ್ತಿದ್ದರೆ ಮುಹಮ್ಮದ್ ಮನ್ಸೂರ್ ಕೆಳಗಿನಿಂದ ಹಗ್ಗ ಬಿಚ್ಚುತ್ತಿದ್ದ ವೇಳೆ ಆಕಸ್ಮಿಕವಾಗಿ ಲಾರಿಯ ಹಿಂಭಾಗದಲ್ಲಿದ್ದ ಪ್ಲಾಸ್ಟಿಕ್ ಮಣಿಗಳು ತುಂಬಿದ ಚೀಲಗಳು ಒಮ್ಮೆಲೆ ಜಾರಿ ಮುಹಮ್ಮದ್ ಮನ್ಸೂರ್ ಅವರ ಮೇಲೆ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು.

ಕೂಡಲೇ ಅವರನ್ನು ಕಂಪನಿಯ ಕಾರಿನಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸರಿಯಾಗಿ ಲೋಡ್ ಮಾಡದೇ ಇರುವುದು ಪ್ಲಾಸ್ಟಿಕ್ ಗೋಣಿಗಳು ಜಾರಲು ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.