ಕರ್ತವ್ಯ ನಿರತ ಮಲ್ಲೂರು ಪಿಡಿಒಗೆ ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಮಲ್ಲೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ(ಪಿಡಿಒ) ಕರ್ತವ್ಯದಲ್ಲಿದ್ದ ವೇಳೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ಮುಹಮ್ಮದ್ ಹಿದಾಯತುಲ್ಲಾ (25), ಅಹ್ಮದ್ ಬಶೀರ್ (30), ಅಬ್ದುಲ್ ಸಿದ್ದೀಕ್ (33) ಹಾಗೂ ಕುತ್ತಾರು ಮದನಿ ನಗರ ನಿವಾಸಿ ಅಬೂಬಕರ್ ಸಿದ್ದೀಕ್ (26) ಬಂಧಿತ ಆರೋಪಿಗಳು.
ಬಂಧಿತರ ಪೈಕಿ ಹಿದಾಯತುಲ್ಲಾ ಹಾಗೂ ಅಹ್ಮದ್ ಬಶೀರ್ ವಿರುದ್ಧ ಈ ಹಿಂದೆ ನಗರದ ವಿವಿಧ ಠಾಣೆಗಳಲ್ಲಿ ದರೋಡೆ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿವೆ ಎಂದು ಕಮಿಷನರ್ ಹೇಳಿದರು.
ಈ ಘಟನೆ ಮೇ 25ರಂದು ಮಧ್ಯಾಹ್ನ ನಡೆದಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಲ್ಲೂರು ಗ್ರಾಪಂ ಹೊರಗಡೆ ರಸ್ತೆ ಬದಿಯಲ್ಲಿ ನಾಲ್ವರು ಯುವಕರು ಮಾಸ್ಕ್ ಧರಿಸದೆ ನಿಂತಿರುವುದನ್ನು ಗಮನಿಸಿದ ಪಿಡಿಒ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸುವಂತೆ ಅವರಿಗೆ ಸೂಚಿಸಿದ್ದಲ್ಲದೆ, ತನ್ನ ಮೊಬೈಲ್‌ನಿಂದ ಫೋಟೋ, ವೀಡಿಯೋ ತೆಗೆಯಲು ಮುಂದಾದಾಗ ಯುವಕರು ಹಲ್ಲೆ ನಡೆಸಿದ್ದಾರೆ ಎಂದರು.
ಕೋವಿಡ್ 2ನೇ ಅಲೆ ಬಹಳ ಗಂಭೀರವಾದ ಪರಿಣಾಮ ಬೀರಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜಾರಿಗೊಳಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವುದು ಅತೀ ಅಗತ್ಯವಾಗಿದೆ. ನಿಯಮ ಪಾಲನಾ ಅಧಿಕಾರಿಗಳು ನಿಯಮ ಉಲ್ಲಂಘನೆಯಾದ ಸಂದರ್ಭ ನೀಡುವ ಎಚ್ಚರಿಕೆಯನ್ನು ಪರಿಗಣಿಸಿ ಅವರಿಗೆ ಸಹಕರಿಸಬೇಕು. ದುರ್ನಡತೆ ಅಥವಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಲು ಮುಂದಾದರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಮೈದಾನಗಳಲ್ಲಿ ಕ್ರಿಕೆಟ್, ವಾಲಿಬಾಲ್ ಆಡುವುದರ ಬಗ್ಗೆ ನಿಗಾ ವಹಿಸಲಾಗುವುದು. ಈ ಕುರಿತು ಹಲವು ದೂರುಗಳು ಕೇಳಿ ಬರುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಈ ಬಗ್ಗೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿಬ್ಬಂದಿಗೆ ನಿಗಾ ವಹಿಸಲು ಸೂಚಿಸಲಾಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಆಟವಾಡುವುದು ಕಂಡುಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ರಂಜಿತ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.