ಮೂಲ್ಕಿ | ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ; ಬೇಕರಿ ಮಾಲೀಕನ ಮೇಲೆ ಹಲ್ಲೆ- ಐವರು ಯುವಕರ ಬಂಧನ
ಮೂಲ್ಕಿ: ಫೇಸ್‌ಬುಕ್‌ನಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ ಕಾರಣಕ್ಕೆ ಬೇಕರಿಯಲ್ಲಿ ದಾಂಧಲೆ ನಡೆಸಿ, ಮಾಲೀಕನಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಐವರು ಯುವಕರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಘಟನಾ ವಿವರ:
ಕಾರ್ನಾಡಿನ ಐಶಾನಿ ಬೇಕರಿ ನಡೆಸುತ್ತಿರುವ ಕುಂದಾಪುರ ಮೂಲದ ಸುರತ್ಕಲ್ ನಿವಾಸಿ ಯುವಕ ಫೇಸ್‌ಬುಕ್‌ನ ತನ್ನ ಖಾತೆಯಲ್ಲಿ, ಇಸ್ರೇಲ್ ಘಟನೆ ಬಗ್ಗೆ ಸಂದೇಶ ಹಾಕಿ ಪ್ಯಾಲಿಸ್ತೇನ್ ಉಗ್ರರ ವಿರುದ್ಧ ಕೈಗೊಂಡ ಕ್ರಮವನ್ನು ಬೆಂಬಲಿಸಿದ್ದರು. ಈ ಬಗ್ಗೆ ಆಕ್ರೋಶಗೊಂಡ ಸ್ಥಳೀಯ ಯುವಕರು ಬೇಕರಿಗೆ ನುಗ್ಗಿ ಬೆದರಿಕೆ ಹಾಕಿದ್ದಲ್ಲದೆ, ಯುವಕನಿಂದ ಕ್ಷಮೆ ಕೇಳಿಸಿ ವಿಡಿಯೋ ಮಾಡಿದ್ದರು.
ವಿದೇಶದಿಂದ ಇಂಟರ್‌ನೆಟ್ ಕರೆಗಳ ಮೂಲಕ ಬೆದರಿಕೆ ಕೂಡ ಹಾಕಲಾಗಿತ್ತು. ಬಳಿಕ ಸ್ಥಳೀಯ ಹಿಂದು ಸಂಘಟನೆ ಪ್ರಮುಖರು ಬೇಕರಿಗೆ ಭೇಟಿ ನೀಡಿ ಮಾಹಿತಿ ಪಡೆದು ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿ ಪಣಂಬೂರು ಡಿಸಿಪಿ ಮುಂದೆ ಹಾಜರುಪಡಿಸಿದ್ದು, ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಬೇಕರಿಗೆ ಸ್ಥಳೀಯ ಬಿಜೆಪಿ ಹಾಗೂ ಹಿಂದು ಸಂಘಟನೆ ನಾಯಕರೊಂದಿಗೆ ಭೇಟಿ ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ಮೂಲ್ಕಿ ಇನ್ಸ್‌ಪೆಕ್ಟರ್ ಕುಸುಮಾಧರ್ ಅವರಿಂದ ಘಟನೆಯ ಮಾಹಿತಿ ಪಡೆದು ಸೂಕ್ತ ತನಿಖೆಗೆ ಸೂಚಿಸಿದ್ದಾರೆ.