ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಪ್ರಿಯತಮ | ಪ್ಲಾನ್ ಮಾಡಿ ಪ್ರಿಯತಮನನ್ನು ಹೊಡೆದು ಹಾಕಿದ 14 ವರ್ಷದ ಈ ಬಾಲಕ
4 ವರ್ಷದ ಈ ಬಾಲಕ ತನ್ನ ಅಮ್ಮನ ಸಹಾಯಕ್ಕಾಗಿ ಧಾವಿಸಿದ್ದಾನೆ. ತನ್ನ ತಾಯಿಗೆ ದಿನನಿತ್ಯ ಮನೆಗೆ ಬಂದು ಹಿಂಸೆ ನೀಡುತ್ತಿದ್ದ ಆಕೆಯ ಪ್ರಿಯತಮನನ್ನೇ ಪ್ಲಾನ್ಡ್ ಮರ್ಡರ್ ಮಾಡಿ ಮನೆಗೆ ಮರಳಿದ್ದಾನೆ.
ಈ ಆಘಾತಕಾರಿ ಘಟನೆ ಗುಜರಾತ್ನ ಅಹ್ಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹಾಗೂ ತಾಯಿಯ ಮೇಲೆ ದೈಹಿಕವಾಗಿ ಹಿಂಸೆ ನೀಡಿದ್ದರಿಂದ ಕೃತ್ಯ ಎಸಗಿರುವುದಾಗಿ ಸಿಕ್ಕಿಬಿದ್ದ ಬಳಿಕ ಬಾಲಕ ಹೇಳಿದ್ದಾನೆ.
ಹತ್ತು ವರ್ಷಗಳ ಹಿಂದೆ ಈ ಹುಡುಗನ ತಾಯಿ ತನ್ನ ಪ್ರಿಯಕರನ ಜೊತೆ ಒಟ್ಟಿಗೆ ವಾಸಿಸಲು ಶುರು ಮಾಡಿದ್ದಳು. ಅವರು ಬಾಲಕನೊಂದಿಗೆ ತನ್ನ ಪ್ರಿಯಕರನ ಜೊತೆ ಆಗಮಿಸಿ ಒಟ್ಟಿಗೆ ವಾಸಿಸುತ್ತಿದ್ದರು. ಮೊದ ಮೊದಲು ಚೆನ್ನಾಗಿದ್ದ ಪ್ರಿಯಕರ ಇತ್ತೀಚೆಗೆ ಪ್ರತಿ ನಿತ್ಯ ಬಾಲಕನ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ. ಇದನ್ನು ತಡೆಯಲು ಹೋದ ಬಾಲಕನನ್ನು ಸಹ ಹೊಡೆಯುತ್ತಿದ್ದ.
ಪ್ರಿಯತಮೆ ಜೊತೆಗೆ ಆಕೆಯ ಮಗನನ್ನು ಸಹ ಮನಬಂದಂತೆ ನಿತ್ಯ ಥಳಿಸುತ್ತಿದ್ದ ಕಾರಣ ಹುಡುಗ ಸಿಟ್ಟಿಗೆದ್ದಿದ್ದ. ಇದಕ್ಕೆಲ್ಲ ಆದಷ್ಟು ಬೇಗ ಒಂದು ಕೊನೆ ತಲುಪಿಸಬೇಕೆಂದು ಹುಡುಗ ಅಂದುಕೊಂಡಿದ್ದಾನೆ. ಅದರಂತೆ ಈ 14 ವರ್ಷದ ಬಾಲಕ ತನ್ನ ತಾಯಿಯ ಪ್ರಿಯಕರನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಮೊನ್ನೆ ಮೇ 17 ರಂದು ಅಹ್ಮದಾಬಾದ್ನ ಬೆಹ್ರಾಂಪುರದ ಕ್ಯಾಲಿಕೊ ಮಿಲ್ ಕಾಂಪೌಂಡ್ ಬಳಿಯ ನಿರ್ಜನ ಪ್ರದೇಶಕ್ಕೆ ಬೈಕ್ನಲ್ಲಿ ಪ್ಲಾನ್ ಮಾಡಿ ಕರೆದೊಯ್ದು ಕೊಲೆ ಮಾಡಿದ್ದಾನೆ.
ಆದರೆ ಅಪರಾಧ ವಿಭಾಗದ ಪೊಲೀಸರ ಜಾಣ್ಮೆಯಿಂದ ಈ ಜುವೆನೈಲ್ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ. ಇದೀಗ ಬಾಲಕ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದು, ತನ್ನ ತಾಯಿಯ ಪ್ರಿಯತಮನನ್ನು ಕೊಲೆ ಮಾಡಲೆಂದೇ ಬಾಲಕ ಹರಿತವಾದ ಹೊಸ ಚಾಕು ಖರೀದಿಸಿದ್ದ ಎಂಬ ಅಂಶ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ ಬಾಲಕ ಸಂತ್ರಸ್ತನನ್ನು ಕರೆದೊಯ್ದಿದ್ದ ಬೈಕ್ನ್ನು ಸಹ ಪೊಲೀಸರು ಸೀಜ್ ಮಾಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ಡ್ಯಾನಿಲಿಮ್ಡಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.