ದಿಲ್ಲಿ ಮೀಟಿಂಗ್ ನಂತರ ಹಳ್ಳಿಯತ್ತ ಉಡುಪಿ ಜಿಲ್ಲಾಧಿಕಾರಿ | ಗ್ರಾಮೀಣ ಜನರಲ್ಲಿ ಧೈರ್ಯ ಮೂಡಿಸುವ ಉದ್ದೇಶ

ಜಿಲ್ಲೆಯಲ್ಲಿ ಕೊರೋನಾ ಗೆದ್ದರೆ ಅದು ದೇಶವನ್ನೇ ಗೆದ್ದಂತೆ ಎಂದು ನರೇಂದ್ರ ಮೋದಿಯವರು ಮೊನ್ನೆ ಡಿಸಿಗಳ ಸಭೆಯನ್ನುದ್ದೇಶಿಸಿ ಹೇಳಿದ್ದರು. ಹಳ್ಳಿಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಹಳ್ಳಿ ಜನರ ಕಡೆ ಜಿಲ್ಲೆಯ ಅಧಿಕಾರಿಗಳು ಗಮನ ಕೊಡಿ ಎಂದು ಕೇಂದ್ರ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಉಡುಪಿಯ ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ.

 

ಅವರು ಮೊದಲಿಗೆ ಉಡುಪಿ ಜಿಲ್ಲೆಯ ಕೋವಿಡ್ ಪೀಡಿತ ಹಳ್ಳಿಗಳಿಗೆ ಭೇಟಿ ಕೊಟ್ಟು ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಕಾಪು ತಾಲೂಕಿನ ಕಟಪಾಡಿ, ಪಡುಬಿದ್ರೆಗೆ ತೆರಳಿ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ತಮ್ಮ ಭೇಟಿಯ ಸಂದರ್ಭ, ಅಗತ್ಯವಿದ್ದರೆ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮನವರಿಕೆ ಮಾಡುತ್ತಿದ್ದಾರೆ. ಹೆಬ್ರಿ ತಾಲೂಕು ಮುದ್ರಾಡಿಗೆ ತೆರಳಿ ಪರಿಸ್ಥಿತಿ ಅವಲೋಕನ ಮಾಡಿದ್ದು, ಹಳ್ಳಿಗಳಿಂದ ತಾಲೂಕಿಗೆ ಚಿಕಿತ್ಸೆಗೆ ಬರುವವರಿಗೆ ವಾಹನ ವ್ಯವಸ್ಥೆಗೂ ಜಿಲ್ಲಾಡಳಿತ ಚಿಂತನೆ ಮಾಡಿದೆ ಎನ್ನಲಾಗಿದೆ.

ಸುರಿಯುವ ಜಡಿಮಳೆಯಲ್ಲೂ ಕೊಡೆ ಹಿಡಿದುಕೊಂಡು ಜಿಲ್ಲಾಧಿಕಾರಿ ಹಳ್ಳಿ ಸಂಚಾರ ಮಾಡಿ ಜನಜಾಗೃತಿ ಜೊತೆ ಸೋಂಕಿತರ ಮನೆಗೆ ತೆರಳಿ ಧೈರ್ಯ ತುಂಬುವ ಕೆಲಸ ಮಾಡಿದ್ದು ಜನರ ಸಂತಸಕ್ಕೆ ಕಾರಣವಾಗಿದೆ.

ನಂತರ ಮಾತನಾಡಿದ ಉಡುಪಿ ಡಿಸಿ ಜಿ.ಜಗದೀಶ್, ಕೇಂದ್ರ ಸರ್ಕಾರದಿಂದ ಬಂದಿರುವ ಆದೇಶದ ಪ್ರಕಾರ ಮೊದಲು ಹಳ್ಳಿಗಳನ್ನು ಕೊರೊನಾ ಮುಕ್ತ ಮಾಡಬೇಕು. ಗ್ರಾಮಾಂತರ ಪ್ರದೇಶದ ಜನರ ಜೊತೆ ಜಿಲ್ಲಾಡಳಿತ ಸದಾ ಇರುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ಹತ್ತಿರದ ಕೋವಿಡ್ ಕೇರ್ ಸೆಂಟರ್ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಪ್ಪಿದರೆ ಜಿಲ್ಲಾಸ್ಪತ್ರೆಗೆ ಬನ್ನಿ. ಸಾಂಕ್ರಾಮಿಕ ರೋಗ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುವುದರಿಂದ ಚಿಕಿತ್ಸೆ ನೀಡಲು ಕಷ್ಟವಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದವರು ತಿಳಿಸಿದ್ದಾರೆ.

ಈ ಮಧ್ಯೆ ಶಾಸಕರ ಅನುದಾನ ಬಳಸಿಕೊಂಡು ಸುಮಾರು 5 ಸಾವಿರ ಆಕ್ಸಿ ಮೀಟರ್ ಗಳನ್ನು ವಿತರಿಸುವ ಯೋಜನೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.