ತೌಕ್ತೆ ನಂತರ ಬರಲಿದೆ ಮತ್ತೊಂದು ಚಂಡಮಾರುತ | ಹವಾಮಾನ ಇಲಾಖೆಯಿಂದ ಮುನ್ಸೂಚನೆ
ಕಳೆದೊಂದು ವಾರದಿಂದ ದಕ್ಷಿಣ ಭಾರತದಲ್ಲಿ ಅಬ್ಬರಿಸಿದ್ದ ಚಂಡಮಾರುತ ಈಗಷ್ಟೇ ಶಾಂತವಾಗುತ್ತಿದೆ. ಹೀಗಿರುವಾಗಲೇ ಮತ್ತೊಂದು ಚಂಡಮಾರುತದ ಮುನ್ಸೂಚನೆ ದೊರೆತಿದೆ.
ತೌಕ್ತೆ ಚಂಡಮಾರುತವು ಭಾರತದ ಪಶ್ಚಿಮ ಕರಾವಳಿ ಭಾಗದಲ್ಲಿ ತೀವ್ರ ಹಾನಿ ಮಾಡಿದ್ದು, ಇದೀಗ ಇದರ ಬೆನ್ನಲ್ಲೇ ಮತ್ತೊಂದು ಚಂಡಮಾರುತವು ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಈಗಾಗಲೇ ಬಂದು ಹೋಗಿರುವ ತೌಕ್ತೆ ಚಂಡಮಾರುತದಿಂದ ಭಾರಿ ಹಾನಿಯಾಗಿದ್ದು, ಮುಂದೆ ಬರಲಿರುವ ಚಂಡಮಾರುತವು ಜನರಲ್ಲಿ ಆತಂಕ ಹೆಚ್ಚಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಮೇ 23ರ ಸುಮಾರಿಗೆ ಸೃಷ್ಟಿಯಾಗಲಿರುವ ಚಂಡಮಾರುತಕ್ಕೆ ‘ಯಾಸ್’ ಎಂದು ಹೆಸರಿಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಮುಖ್ಯಸ್ಥೆ ಸುನೀತಾ ದೇವಿ, “ಮುಂದಿನ ವಾರ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಬಹುದು. ಇದು ತೀವ್ರಗೊಳ್ಳುವ ಸಾಧ್ಯತೆಯೂ ಇದೆ, ಹಾಗಾಗಿ ದೇಶದ ಪೂರ್ವ ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಚಂಡಮಾರುತ ಕಾಣಿಸಿಕೊಳ್ಳಬಹುದು. ಮುಂದಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ತಕ್ಷಣ ಮುನ್ಸೂಚನೆಗಳನ್ನು ನೀಡಲಿದ್ದೇವೆ” ಎಂದು ಹೇಳಿದ್ದಾರೆ.
ಇನ್ನು ಬಂಗಾಳ ಕೊಲ್ಲಿಯಲ್ಲಿ ಆಗುತ್ತಿರುವ ಬದಲಾವಣೆಗಳು ವಾಯುಭಾರ ಕುಸಿತ ಮತ್ತು ಚಂಡಮಾರುತವನ್ನು ಸೃಷ್ಟಿಸಬಹುದು. ಆದರೆ ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಚಂಡಮಾರುತವು ಮ್ಯಾನ್ಮಾರ್ನತ್ತ ಚಲಿಸುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ತಜ್ಞ ಮಹೇಶ್ ಪಲಾವಟ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ಈ ಚಂಡಮಾರುತಗಳಿಂದ ಕರಾವಳಿ ಭಾಗಗಳಿಗೆ ಆಗುವ ಹಾನಿ ಮಾತ್ರ ತಪ್ಪಿದ್ದಲ್ಲ.