ವಿಶ್ವದ ಶ್ರೀಮಂತ ದೇವ ತಿರುಪತಿ ತಿಮ್ಮಪ್ಪನ ಊರಲ್ಲೊಬ್ಬ ಶ್ರೀಮಂತ ಭಿಕ್ಷುಕ
ವಿಶ್ವದ ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಊರು ತಿರುಪತಿಯಲ್ಲಿ ಇರುವ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು ಇಲ್ಲಿ ಭಿಕ್ಷುಕ ಕೂಡ ಶ್ರೀಮಂತನಾಗಿದ್ದಾನೆ !
ಈ ಶ್ರೀಮಂತ ಭಿಕ್ಷುಕನನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಈ ಭಿಕ್ಷುಕ ಕೂಡ ತಿರುಮಲೆ ವಾಸಿ ತಿಮ್ಮಪ್ಪನ ಹೆಸರನ್ನೇ ಹೊಂದಿದ್ದಾನೆ. ತಿರುಪತಿಯ ಶೇಷಾಚಲ ನಗರದ ನಿವಾಸಿಯಾದ ಈ ರಿಚ್ ಭಿಕ್ಷುಕ ತಿರುಪತಿಗೆ ಬರುತ್ತಿದ್ದ ವಿಐಪಿಗಳ ಬಳಿ ಮಾತ್ರ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಅದೇ ಕಾರಣಕ್ಕೆ ಈತನಿಗೆ ಭರ್ಜರಿ ಕಲೆಕ್ಷನ್ ಆಗುತ್ತಿತ್ತು. ಈತ ತನ್ನ ವಶೀಲಿ ಉಪಯೋಗಿಸಿ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯನ್ನು ಕೂಡ ಮಂಜೂರು ಮಾಡಿಸಿಕೊಂಡಿದ್ದ.
ಭಿಕ್ಷುಕ ಶ್ರೀನಿವಾಸನ್, ಅನೇಕ ವರ್ಷಗಳಿಂದ ತಿರುಮಲ ಬೆಟ್ಟದಲ್ಲಿ ವಾಸವಿದ್ದ. ಆದರೆ, ಟಿಟಿಡಿಯ ಯೋಜನೆಯಂತೆ ಭಿಕ್ಷುಕನನ್ನು ಬಲವಂತವಾಗಿ ಹೊರದೂಡಲಾಗಿತ್ತು. ಅಲ್ಲದೆ, ಆತನನ್ನು ತಿರುಪತಿ ವಲಸಿಗ ಎಂದು ಶೇಷಾಚಲ ಕಾಲನಿಯಲ್ಲಿ ಮನೆಯೊಂದನ್ನು ಕೊಡಲಾಗಿತ್ತು. ಅಲ್ಲಿಯೇ ಉಳಿದಿದ್ದ ಶ್ರೀನಿವಾಸ್ ಅನಾರೋಗ್ಯಕ್ಕೀಡಾಗಿ ಕಳೆದ ವರ್ಷವೇ ಮೃತಪಟ್ಟಿದ್ದಾನೆ. ಆತನಿಗೆ ಯಾವುದೇ ಕುಟುಂಬ ಸದಸ್ಯರು ಇಲ್ಲದಿರುವುದಿಂದ ಟಿಟಿಡಿ ಅಧಿಕಾರಿಗಳು ನಿನ್ನೆ ಭಿಕ್ಷುಕನ ಮನೆಯನ್ನು ತೆರವುಗೊಳಿಸುವ ಸಮಯದಲ್ಲಿ ಪರಿಶೀಲನೆ ನಡೆಸಿದಾಗ ಎರಡು ಟ್ರoಕ್ ಬಾಕ್ಸ್ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಅದರೊಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
ಕಂತೆ ಕಂತೆ ಮಡಚಿ ಇಟ್ಟಿದ್ದ ನೋಟುಗಳನ್ನು ಎಣಿಸಿದಾಗ ಅದರಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಇರುವುದು ಪತ್ತೆಯಾಗಿದೆ. ಆತನ ಮನೆಯಲ್ಲಿ 500 ಮತ್ತು 2000 ಮುಖಬೆಲೆಯ ನೋಟುಗಳು ದೊರೆತಿವೆ. ಅಲ್ಲದೆ, 1000 ರೂಪಾಯಿ ಮುಖಬೆಲೆಯ ರದ್ದಾದ ನೋಟುಗಳು ಸಹ ದೊರೆತ್ತಿದ್ದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ತಿರುಪತಿ ದೇವರ ದರ್ಶನಕ್ಕೆಂದು ಯಾತ್ರಿಯಾಗಿ ತಿರುಮಲ ಬೆಟ್ಟಕ್ಕೆ ಬಂದಿದ್ದ ಶ್ರೀನಿವಾಸನ್ ಭಿಕ್ಷುಕನಾಗಿ ಇಲ್ಲಿಯೇ ಉಳಿದುಕೊಂಡಿದ್ದ. ಶ್ರೀಮಂತರ ಕೈಲಿ ಯಥೇಚ್ಛ ದಾನವನ್ನು ಪಡೆದುಕೊಂಡ ಈತ ಸಾಯುವ ವೇಳೆಗೆ ಶ್ರೀಮಂತನಾಗಿದ್ದ. ಭಿಕ್ಷುಕ ವೃತ್ತಿ ಈತನಿಗೆ ಅನಾರೋಗ್ಯವನ್ನು ದಯಪಾಲಿಸಿತ್ತು. ಇಷ್ಟೊಂದು ದುಡ್ಡು ದುಡಿದರೂ ಅದನ್ನು ಅನುಭವಿಸುವ ಯೋಗ ಅವನಿಗೆ ಕೊನೆಗೂ ದಕ್ಕಲಿಲ್ಲ.