ಕಾರಿನಲ್ಲಿ ಕೂತು ಸಿಗರೇಟು ಸೇದುತ್ತಿದ್ದ ವ್ಯಕ್ತಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡ | ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾದ ಕಾರು
ಒಂದೇ ಒಂದು ನಿರ್ಲಕ್ಷ್ಯ..ಒಂದು ಮೈ ಮರೆವು ; ಕಾರು ಸಂಪೂರ್ಣ ಭಸ್ಮವಾಗಿದೆ. ಚಾಲಕನಿಗೂ ಸುಟ್ಟ ಗಾಯಗಳಾಗಿದೆ. ಆತನ ಅದೃಷ್ಟ ಗಟ್ಟಿಯಾಗಿತ್ತುು, ದೇವರ ದಯದಿಂದ ಆತ ಬದುಕಿಕೊಂಡಿದ್ದಾನೆ.
ಗುರುವಾರ ಸಂಜೆ ಕಾರಿನೊಳಗೆ ಕುಳಿತಿದ್ದ ಚಾಲಕ ಸಿಗರೇಟು ಸೇದುತ್ತಿದ್ದ. ಇದರ ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಕೂಡಾ ಬಳಸಿದ್ದ. ಪರಿಣಾಮ, ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈತನಿಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದರೂ ಅದೃಷ್ಟವಶಾತ್ ಪ್ರಾಣಕ್ಕೇನು ಅಪಾಯವಾಗಿಲ್ಲ.
ಕೊರೊನಾ ಅಬ್ಬರ ಶುರುವಾದ ಬಳಿಕ ಸ್ಯಾನಿಟೈಸರ್ ವ್ಯಾಪಕವಾಗಿ ಬಳಕೆಯಾಗುತ್ತದೆ. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಯಾನಿಟೈಸರ್ ಬಳಸುವುದು ಅತೀ ಅಗತ್ಯವೂ ಹೌದು. ಆದರೆ, ಕೆಲವೊಮ್ಮೆ ಇದರಿಂದ ಅಪಾಯ ಎದುರಾಗುವುದೂ ಇದೆ. ಆಲ್ಕೋಹಾಲ್ ಮತ್ತಿತರ ದಹನ ವಸ್ತುಗಳನ್ನು ಹೊಂದಿರುವ ಸ್ಯಾನಿಟೈಸರ್ ಬಳಸಿ ಬೆಂಕಿಯ ಹತ್ತಿರ ಹೋಗುವುದು ಪೆಟ್ರೋಲ್ ನಷ್ಟೆ ಅಪಾಯಕಾರಿ. ಹೀಗಾಗಿ, ಸ್ಯಾನಿಟೈಸರ್ ಬಳಸಿ ಗ್ಯಾಸ್ ಉರಿಸುವುದು, ಬೆಂಕಿಪೊಟ್ಟಣ ಬಳಸುವುದು ಡೇಂಜರ್. ಸ್ಯಾನಿಟೈಸರ್ ನ ಕ್ಲೌಡ್ ಇರುವಾಗ ಅದಕ್ಕೆ ಸಿಗರೇಟಿನ ತುದಿಯ ಬೆಂಕಿ, ಮ್ಯಾಚ್ ಬಾಕ್ಸ್ ಕಡ್ಡಿ ಗೀರುವಿಕೆ, ಲೈಟರ್, ಕಾರಿನ ಎಲೆಕ್ಟ್ರಿಕಲ್ ಲೈಟರ್ ಮುಂತಾದ ಯಾವುದೇ ಬೆಂಕಿಯ ಮೂಲಗಳು ಪಕ್ಕ ಇರಬಾರದು.
ಅಲ್ಲದೆ, ಕಾರಿನೊಳಗೆ ಅಥವಾ ಗಾಳಿ ತುಂಬಾ ಓಡಾಡದೇ ಇರುವಂತಹ ಜಾಗಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಇನ್ನಷ್ಟು ಅಪಾಯಕಾರಿ. ಸಾವಿಗೆ ಅಡ್ವಾನ್ಸ್ ಕೊಟ್ಟು ಕರೆದುಕೊಂಡು ಬಂದು ಪಕ್ಕದಲ್ಲಿ ಕೂರಿಸಿಕೊಂಡಂತೆಯೇ ಸರಿ !
ಅಂದ ಹಾಗೆ ಇದು ನಡೆದಿರುವುದು ಮೇರಿಲ್ಯಾಂಡ್ನ ರಾಕ್ವಿಲ್ಲೆಯಲ್ಲಿರುವ ಶಾಪಿಂಗ್ ಕೇಂದ್ರದಲ್ಲಿ.