ಹೊಸ ಅವತಾರದೊಂದಿಗೆ ನಾಳೆಯಿಂದಲೇ ಭಾರತಕ್ಕೆ ಲಗ್ಗೆ ಇಡಲಿದೆ ಪಬ್ಜಿ
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ಜಿ ಮೊಬೈಲ್ ಗೇಮ್ ಹೊಸ ರೂಪಾಂತರದೊಂದಿಗೆ ಗೇಮ್ ಲೋಕಕ್ಕೆ ಲಗ್ಗೆ ಇಡುತ್ತಿದೆ.
ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬುದೇ ಇದರ ಹೆಸರು. ಪಬ್ಜಿ ನಿರ್ಮಾತೃ ದಕ್ಷಿಣ ಕೊರಿಯಾ ಮೂಲದ ಕ್ರಾಪ್ಟನ್ ಭಾರತ ದೇಶಕ್ಕಾಗಿಯೇ ಈ ಹೊಸ ಗೇಮ್ ಬಿಡುಗಡೆ ಮಾಡಲಿದ್ದಾರೆ.
ಚೀನಾ ಮೂಲದ ಅಪ್ಲಿಕೇಶನ್ ಜತೆಗೇ ಚೀನಾದ ಸರ್ವರ್ ನಿರ್ವಹಣೆ ಹೊಂದಿದ್ದ ಪಬ್ಜಿ ಮೊಬೈಲ್ ಈಗ ಮತ್ತೆ ಹೊಸರೂಪದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಅಂದರೆ, ಭಾರತದಲ್ಲೇ ಪ್ರತ್ಯೇಕ ಸರ್ವರ್ ಸ್ಥಾಪನೆ ಮತ್ತು ಹೊಸದಾಗಿ ಸರಕಾರದ ನಿಯಮಾವಳಿಗೆ ಪೂರಕವಾಗುವಂತೆ ಗೇಮ್ ವಿನ್ಯಾಸ ಮಾಡಿರುವುದು ಕೂಡ ಪಬ್ಜಿ ಜನಪ್ರಿಯತೆ ಹೆಚ್ಚಿಸಲಿದೆ.
ನೂತನ ಪಬ್ಜಿ ಗೇಮ್, ಭಾರತೀಯ ಆವೃತ್ತಿಯಾಗಿದ್ದು, ಜಾಗತಿಕ ಆವೃತ್ತಿಗಿಂತ ಭಿನ್ನವಾಗಿರುತ್ತದೆ. ಜತೆಗೆ ಬಜೆಟ್ ಸರಣಿಯ ಸ್ಮಾರ್ಟ್ಫೋನ್ ಬಳಸುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ RAM ಮತ್ತು ಪ್ರೊಸೆಸರ್ ಇರುವ ಫೋನ್ನಲ್ಲೂ ಸರಾಗವಾಗಿ ಕಾರ್ಯನಿರ್ವಹಿಸುವಂತೆ ಹೊಸ ಪಬ್ಜಿ ಗೇಮ್ ರೂಪಿಸಲಾಗುತ್ತಿದೆ.
ಈ ಗೇಮ್ನ ಪೂರ್ವ ನೋಂದಣಿ ಪ್ರಕ್ರಿಯೆಯು ಇದೇ ಮೇ 18 ನೇ ದಿನಾಂಕದಿಂದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಇಷ್ಟು ದಿನ ವನವಾಸ ಅನುಭವಿಸಿದ್ದ ಪಬ್ಜಿ ಪ್ರೇಮಿಗಳಿಗೆ ಇನ್ನು ಮುಂದೆ ಹೊಸ ಆಟದ ಬಾಡೂಟ ದೊರಕಲಿದೆ.
ಇದು ಆಡಳಿತಾತ್ಮಕ ಅಂಶಗಳನ್ನು ಒಳಗೊಂಡಿದ್ದು, ವಿಶೇಷವಾಗಿ ಭಾರತ ದೇಶಕ್ಕಾಗಿಯೇ ನಿರ್ಮಾಣ ಗೊಂಡಿದೆ ಎಂಬುದು ಹೆಮ್ಮೆಯ ಸಂಗತಿ.ಇದರ ನಿರ್ಬಂಧಗಳು, ನಿಯಮಗಳು ಹೇಗಿವೆ ಎಂಬುದನ್ನು ಇನ್ನು ಮುಂದೆ ಕಾದುನೋಡಬೇಕಿದೆ.