ರಾಜ್ಯದಲ್ಲಿ ಮತ್ತೆ ಜನತಾ ಲಾಕ್‍ಡೌನ್ ವಿಸ್ತರಣೆ ಖಚಿತ | ಸ್ಪೆಷಲ್ ಪ್ಯಾಕೇಜ್ ಘೋಷಿಸಲಿರುವ ಸರ್ಕಾರ !

ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಕೇವಲ ಟೆಸ್ಟಿಂಗ್ ಕಡಿಮೆ ಮಾಡಿರೋ ಕಾರಣ ಕಡಿಮೆ ಸಂಖ್ಯೆ ಪಾಸಿಟೀವ್ ಬರುತ್ತಿದೆ ಎನ್ನಲಾಗುತ್ತಿದೆಯಾದರೂ, ಅದು ಪೂರ್ತಿ ನಿಜವಲ್ಲ. ಸ್ವಲ್ಪ ಮಟ್ಟಿಗೆ ರೋಗ ನಿಯಂತ್ರಣ ಬಂದದ್ದಂತೂ ನಿಜ. ಆದರೆ ಈಗ ಇರುವ ಸಕ್ರಿಯ ಕೇಸ್‍ಗಳ ಸಾಲಿನಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ನಂಬರ್ 1 ಇದ್ದು ಇಲ್ಲಿ 6 ಲಕ್ಷ ಸಕ್ರಿಯ ಕೇಸ್‍ಗಳಿವೆ. ನಮ್ಮಲ್ಲಿ ಪಾಸಿಟಿವಿಟಿ ರೇಟ್ 25 ಕ್ಕಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಲಾಕ್‍ಡೌನ್‍ಗೆ ಸರ್ಕಾರದ ಸಚಿವರು, ತಜ್ಞರು ಕೂಡ ಒತ್ತಡ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇನ್ನೊಂದು ವಾರ ಅಂದರೆ ಮೇ 24ರ ಜೊತೆಗೆ ಮೇ 30 ರವರೆಗೂ ಲಾಕ್‍ಡೌನ್ ವಿಸ್ತರಿಸೋದಕ್ಕೆ ಎಲ್ಲಾ ರೀತಿಯ ಸಿದ್ಧತೆ ಸರಕಾರದ ಕಡೆಯಿಂದ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸಂದೇಶ ರವಾನಿಸಿ, ಯಾವುದಕ್ಕೂ ನೀವು ಸನ್ನದ್ಧರಾಗಿ ಇರಿ ಎಂದು ಸೂಚಿಸಲಾಗಿದೆ.

ಇದರ ಜೊತೆಗೆ ನೆರೆಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ,ದೆಹಲಿ ಸೇರಿ ಹಲವು ರಾಜ್ಯಗಳು ಬಡ ವರ್ಗದ ಜನರಿಗೆ ಲಾಕ್‍ಡೌನ್ ವಿಶೇಷ ಪ್ಯಾಕೇಜ್ ಘೋಷಿಸಿರೋದು ಬಿಎಸ್‍ವೈ ಸರ್ಕಾರದ ಮೇಲೆ ಪರೋಕ್ಷ ಒತ್ತಡ ತಂದಿದೆ. ಅಲ್ಲದೆ ವಿಪಕ್ಷಗಳು, ಜನಸಾಮಾನ್ಯರು ವಿಶೇಷ ಪ್ಯಾಕೇಜ್‍ಗೆ ಒತ್ತಾಯಿಸಿ, ಬೀದಿಗೆ ಇಳಿಯುತ್ತಿದ್ದಾರೆ. ಹೀಗಾಗಿ ಬೇರೆ ಏನು ಉಪಾಯವಿಲ್ಲದೆ ಕಂಗೆಟ್ಟು ಕುಳಿತಿರುವ ಬಡ ಮತ್ತು ಶ್ರಮಿಕ ವರ್ಗಕ್ಕೆ ಸ್ಪೆಷಲ್ ಪ್ಯಾಕೇಜ್ ನೀಡಲು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ ಎಂದು ತಿಳಿದುಬಂದಿದೆ.

ಇನ್ನು ಮೂರು ದಿನಗಳಲ್ಲಿ ಲಾಕ್‍ಡೌನ್ ಪ್ಯಾಕೇಜ್ ಅನ್ನು ಸಿಎಂ ಅಂತಿಮಗೊಳಿಸಲಿದ್ದು, ಈಗಾಗಲೇ ಹಣಕಾಸು ಸಚಿವಾಲಯದ ಅಧಿಕಾರಿಗಳ ಜೊತೆ ಚಿಂತನೆ ನಡೆಸಿದ್ದಾರೆ ಮುಖ್ಯಮಂತ್ರಿಗಳು. ಇದೆ ಬರುವ ಗುರುವಾರ ಲಾಕ್‍ಡೌನ್ ವಿಸ್ತರಣೆಯ ವಿಚಾರ.ಮತ್ತು ಲಾಕ್‍ಡೌನ್ ಪ್ಯಾಕೇಜ್ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತ ಘೋಷಣೆ ಮಾಡುವ ಸಂಭವ ಇದೆ. ಯಾರಿಗೆ ಯಾವ ರೀತಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಬಹುದು, ಅದರ ಬಜೆಟ್ ಎಷ್ಟಿರಬಹುದು, ಈಗ ಇರುವ ಆರ್ಥಿಕ ಸಂಕಷ್ಟದ ಮಧ್ಯೆ ಜನರನ್ನು ಮೆಚ್ಚಿಸುವ ಕೆಲಸ ಆಗಬಹುದಾ ಎಂಬ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮತ್ತೆ 2 ವಾರ ಲಾಕ್‍ಡೌನ್‍ಗೆ ತಜ್ಞರ ಸಲಹೆ

ಲೋಕಲ್ ಲಾಕ್‍ಡೌನ್ ಮಾಡಿ ಅಥವಾ ಜೂನ್ ತಿಂಗಳ ಮೊದಲ ಎರಡು ವಾರದವರೆಗೂ ಈಗಿರುವ  ಲಾಕ್‍ಡೌನ್ ವಿಸ್ತರಣೆ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ತಜ್ಞರ ವರದಿಯಲ್ಲಿ ಇರೋ ಅಂಶಗಳು

* ರಾಜ್ಯದಲ್ಲಿ ಮೇ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿ
* ಸೋಂಕು ತಗ್ಗದಿದ್ದರೆ ಜೂನ್‍ನ ಮೊದಲ 15 ದಿನ ಕಂಪ್ಲೀಟ್ ಲಾಕ್ ಮಾಡಿ
* ವಾರದಲ್ಲಿ 2 ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಿ (ನಿತ್ಯ ಬೇಡ)
* ಮದ್ಯದಂಗಡಿಗಳಲ್ಲಿ ಪಾರ್ಸೆಲ್‍ಗೂ ಬ್ರೇಕ್ ಹಾಕಿ, ಬಂದ್ ಮಾಡಿ
* ಖಾಸಗಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಿ
* ಟ್ರೇಸಿಂಗ್, ಟ್ರೀಟ್ಮೆಂಟ್, ಟೆಸ್ಟಿಂಗ್ ಹೆಚ್ಚಳ ಮಾಡಿ
* ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಿ
* ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಆಗದಂತೆ ನೋಡಿಕೊಳ್ಳಿ

ಸರ್ಕಾರ ಘೋಷಿಸಲಿರುವ ಪ್ಯಾಕೇಜ್ ನಲ್ಲಿ ಇರಬಹುದಾದ ಸಂಭಾವ್ಯ ಅಂಶಗಳು

ಲಾಕ್‍ಡೌನ್‍ನಿಂದ ಸಾಕಷ್ಟು ತೊಂದರೆ ಅನುಭವಿಸಿರುವ ಕೆಳ ವರ್ಗದ ಜನರಿಗೆ ಕಳೆದ ಬಾರಿಯಂತೆಯೇ ನಗದು ಹಾಕ್ತಾರಾ ಅನ್ನೋ ನಿರೀಕ್ಷೆ ಕೂಡ ಇದೆ. ಅವುಗಳಲ್ಲಿ ಪ್ರಮುಖವಾದುದು :
* ಆಟೋ/ಕ್ಯಾಬ್ ಚಾಲಕರ ಖಾತೆಗೆ ಹಣ ನೀಡುವ ಪ್ರಸ್ತಾಪ. ಕಳೆದ ವರ್ಷ 5 ಸಾವಿರ ನೆರವು)
* ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು?
* ಮಡಿವಾಳ, ಸವಿತಾ ಸಮುದಾಯಕ್ಕೆ ನೆರವು? (ಕಳೆದ ವರ್ಷ 5 ಸಾವಿರ ನೆರವು)
* ಕಟ್ಟಡ ಕಾರ್ಮಿಕರಿಗೆ ಮನಿ ಪ್ಯಾಕೇಜ್
* ಹೋಟೆಲ್ ಕಾರ್ಮಿಕರಿಗೆ ಹಣದ ಪ್ಯಾಕೇಜ್..
* ಹೂ, ತರಕಾರಿ ಬೆಳೆಗಾರರಿಗೆ ಹಣದ ನೆರವು
* ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ

ನಾಳೆ ಎಲ್ಲಾ ಡಿಸಿಗಳ ಜೊತೆ ಸಿಎಂ ಸಭೆ..!
ಬುಧವಾರ ಪ್ರಧಾನಿ ಮೋದಿ, ಸೋಂಕು ಹೆಚ್ಚಿರುವ ರಾಜ್ಯದ 17 ಜಿಲ್ಲೆಗಳ ಡಿಸಿಗಳ ಜೊತೆ ವರ್ಚೂವಲ್ ಸಭೆ ನಡೆಸಲಿದ್ದಾರೆ. ಇದಕ್ಕೂ ಒಂದು ದಿನ ಮೊದಲೇ ಅಂದ್ರೆ ನಾಳೆ ಸಿಎಂ ಯಡಿಯೂರಪ್ಪ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿಗಳು ಲಾಕ್ ವಿಸ್ತರಣೆ ಕುರಿತು ತಮ್ಮ ತಮ್ಮಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಜೊತೆಗೆ ನಾಳೆಯೇ ಕೊರೋನಾ ಉಸ್ತುವಾರಿಗಳ ಸಚಿವರ ಜೊತೆಗೂ ಸಿಎಂ ಸಮಾಲೋಚನೆ ಮಾಡಲಿದ್ದಾರೆ.

Leave A Reply

Your email address will not be published.