ಉಪ್ಪಿನಂಗಡಿ; ವಿವಾಹಿತ ಮಾನಸಿಕ ಅಸ್ವಸ್ಥೆಯ ಅತ್ಯಾಚಾರ ಪ್ರಕರಣ: ಆರೋಪಿ ಸೆರೆ
ವಿವಾಹಿತ ಮಾನಸಿಕ ಅಸ್ವಸ್ಥೆಯೋರ್ವರ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
34 ನೆಕ್ಕಿಲಾಡಿಯ ದರ್ಬೆ ನಿವಾಸಿ ಸುರೇಶ್ ಪ್ರಭು (40) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾಗಿದ್ದು, 34 ನೆಕ್ಕಿಲಾಡಿಯ ಪಾಥರ್ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ತನ್ನ 70 ವರ್ಷದ ತಾಯಿಯೊಂದಿಗೆ 44ರ ಹರೆಯದ ಅತ್ಯಾಚಾರ ಸಂತ್ರಸ್ತೆ ವಾಸಿಸುತ್ತಿದ್ದರು.
ಸಂತ್ರಸ್ತೆಯ ಪತಿ ಗುಜರಾತ್ನಲ್ಲಿದ್ದು, ಗಂಡನನ್ನು ಭೇಟಿಯಾಗದೆ ಸುಮಾರು 10 ತಿಂಗಳಾಗಿತ್ತು ಎಂದು ತಿಳಿದುಬಂದಿದೆ. ಮೇ 12ರಂದು ಇವರಿದ್ದ ಬಾಡಿಗೆ ಮನೆಗೆ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಬಂದಿದ್ದು, ಅವರಿಗೆ ಸಂಶಯ ಬಂದು ಮಹಿಳೆಯನ್ನು ಸ್ಕ್ಯಾನಿಂಗ್ ನಡೆಸಲು ತಿಳಿಸಿದ್ದರು. ಅದರಂತೆ ಈಕೆಯ ಸ್ಕ್ಯಾನಿಂಗ್ ನಡೆಸಿದಾಗ ಈಕೆ ಏಳು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದ್ದು, ಬಳಿಕ ಆಕೆಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ನಡೆದ ಆರೋಪಿಯ ಪತ್ತೆ ಕಾರ್ಯದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಕುಮಾರ್ ಕಾಂಬ್ಳೆ, ಸಿಬ್ಬಂದಿಗಳಾದ ಹರೀಶ್ಚಂದ್ರ, ನಂಜುಂಡ, ಹರೀಶ್, ರೇವಣ್ಣ, ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಜಗದೀಶ್, ಧರ್ನಪ್ಪ, ಸಲೀಂ, ಚಾಲಕರಾದ ಕನಕರಾಜ್, ನವಾಝ್ ಬುಡ್ಕಿ ಭಾಗವಹಿಸಿದ್ದರು.