ಕಡಬ : ಪೆರಾಬೆಯಲ್ಲಿ  ಹೆದ್ದಾರಿಯಲ್ಲೇ ಗೋವಿನ ತಲೆ | ಸೂಕ್ತ ಕ್ರಮಕ್ಕೆ ಒತ್ತಾಯ

        

ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಹಾಗೂ ಪದವು ಮಧ್ಯೆ ಬರುವ ಹೇಮಳ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲೇ ಗೋವಧೆ ಮಾಡುವ ಕಿಡಿಗೇಡಿಗಳು ಗೋವಿನ ತಲೆಯನ್ನು ಹಾಗೂ ಇತರ ತ್ಯಾಜ್ಯವನ್ನು ಎಸೆದು ವಿಕೃತಿ ಮೆರದ ಘಟನೆ ಭಾನುವಾರ ನಡೆದಿದೆ.
ಒಂದು ದನದ ತಲೆ, ಇನ್ನೊಂದು ಪ್ಲಾಸ್ಟಿಕ್ ಚೀಲದಲ್ಲಿ ಗೋವಿನ ಎಲುಬು ಹಾಗೂ ಇನ್ನಿತರತ್ಯಾಜ್ಯವನ್ನು ಬೆಳ್ಳಂಬೆಳಿಗ್ಗೆ ಎಸೆಯಲಾಗಿದೆ.

ಪದವಿನ ಮುರಚೆಡವು ಹಾಗೂ ಹೇಮಳ ಮಧ್ಯೆ ಯಾವುದೇ ವಾಸದ ಮನೆಯಾಗಲಿ ಇತರ ಕಟ್ಟಡವಾಗಲಿ ಇಲ್ಲದೆ ಇರುವ ಈ ಪ್ರದೇಶದಲ್ಲಿ ಅನಾಯಾಸವಾಗಿ ಈ ಕೃತ್ಯ ಮಾಡಲಾಗಿದೆ. ಪದವು ಹಾಗೂ ಕುಂತೂರಿನಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು, ಇಲ್ಲಿ ಗೋವಧೆ ಮಾಡುವ ಕಿಡಿಗೇಡಿಗಳ ಕೃತ್ಯ ಇದು ಎಂದು ಹೇಳಲಾಗಿದೆ.

ಕೊಳೆತ ಸ್ಥಿತಿಯಲ್ಲಿದ ಗೋವಿನ ತಲೆ ಹಾಗೂ ತ್ಯಾಜ್ಯದ ದುರ್ವಾಸನೆ ತಡೆಯಲಾಗದೆ, ಸ್ಥಳೀಯರು ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂತು, ತಕ್ಷಣ ಅದನ್ನು ರಸ್ತೆ ಬದಿಗೆ ಸರಿಸಲಾಯಿತು. ಈ ಬಗ್ಗೆ ಪೆರಾಬೆ ಗ್ರಾಮ ಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ರೈ ಅಗತ್ತಾಡಿ , ಸ್ಥಳೀಯ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಈ ಭಾಗದಲ್ಲಿ ಸಿ.ಸಿ ಕ್ಯಾಮರ ಅಳವಡಿಸಬೇಕು ಎಂದು ಸ್ಥಳೀಯರಾದ ಸೋಮಪ್ಪ ಗೌಡ ಹಾಗೂ ಸುಬ್ರಹ್ಮಣ್ಯ ಗೌಡ ಅಗ್ರಹಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಪಂದಿಸರುವ ಪಂ ಅಧ್ಯಕ್ಷರು ಬೇಡಿಕೆಯನ್ನು ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.

ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆತ

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಬಲ್ಯ ಹಾಗೂ ಮುರಚೆಡವು ಹೇಮಳ ಭಾಗದಲ್ಲಿ ಗೋವಿನ ತ್ಯಾಜ್ಯ ಮಾತ್ರವಲ್ಲದೇ ಕೋಳಿ ಹಾಗೂ ಇತರ ಪ್ಲಾಸ್ಟಿಕ್ , ಮನೆಯಲ್ಲಿರುವ ಕೆಲವು ತ್ಯಾಜ್ಯಗಳನ್ನು ನಿತ್ಯ ನಿರಂತರ ಎಸೆಯಲಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದರ ಅನುಭವವಾಗುತ್ತದೆ.

ಮಾತ್ರವಲ್ಲಿ ಇಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರು ದುರ್ನಾಥವನ್ನು ಆಸ್ವಾದಿಸಬೇಕಾಗುತ್ತದೆ. ಮುರಚೆಡವು, ಹೇಮಳ ಪ್ರದೇಶ ಪೆರಾಬೆ ಗ್ರಾಮ ಪಂಚಾಯಿತಿ ಹಾಗೂ ಬಲ್ಯ ಪ್ರದೇಶ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿದ್ದು ಇಲ್ಲಿ ನಿತ್ಯ ನಿರಂತರ ತ್ಯಾಜ್ಯವನ್ನು ಎಸೆದು ಪರಿಸರವನ್ನು ಹಾಳುಗೆಡವಲಾಗುತ್ತಿದೆ. ಮಾತ್ರವಲ್ಲ ಗೋವಿನ ಹಾಗೂ ಕೋಳಿ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದರಿಂದ ಈ ಭಾಗದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದ್ದು, ಸ್ಥಳೀಯಾಡಳಿತ ಪೋಲೀಸರ ನೆರವಿನೊಂದಿಗೆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Leave A Reply

Your email address will not be published.