ಅರಬ್ಬೀ ಸಮುದ್ರದ ಪ್ರಕ್ಷುಬ್ಧ ರಕ್ಕಸ ಅಲೆಗಳಿಗೆ ಉಳ್ಳಾಲದ ಹಿಂದೂ ರುದ್ರಭೂಮಿಯ ತಡೆಗೋಡೆ ಸಮುದ್ರ ಪಾಲು
ಅರಬ್ಬೀ ಸಮುದ್ರದಲ್ಲಿ ನಿಲ್ಲದ ಅಬ್ಬರ. ಇಂದು ಅರಬ್ಬೀ ಸಮುದ್ರದಲ್ಲಿ ಎಂದೂ ಕಂಡಿರದ ಪ್ರಕ್ಷುಬ್ಧತೆ. ಸಮುದ್ರದ ಆಗ್ನೇಯ ಭಾಗದಲ್ಲಿ ಆಗಿರುವ ವಾಯುಭಾರ ಕುಸಿತದ ಎಫೆಕ್ಟ್ ಉಳ್ಳಾಲದ ಕಡಲತಡಿಗೆ ಜೋರಾಗಿಯೇ ತಟ್ಟಿದೆ. ಅಲ್ಲಿ 50 ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿದ್ದು, ಅಲ್ಲಿನ ಜನ ಭಯದಿಂದ ಜೀವನ ಸಾಗಿಸುವಂತಾಗಿದೆ.
ಉಳ್ಳಾಲದ ಸೋಮೇಶ್ವರ ಕಡಲಕಿನಾರೆಗೆ ಒತ್ತಿ ಕೊಂಡಿರುವ ಹಿಂದೂ ರುದ್ರಭೂಮಿಯ ತಡೆಗೋಡೆ ರುದ್ರ ಸಮುದ್ರದ ಭೀಕರ ಅಲೆಗಳ ಹೊಡೆತಕ್ಕೆ ಸಿಕ್ಕು, ನಲುಗಿ, ಕಡೆಗೂ ಸಮುದ್ರ ಪಾಲಾಗಿದೆ.
ಉಳ್ಳಾಲದ ಸುಭಾಷನಗರ, ಕೈಕೋ, ಹಿಲೆರಿಯಾನಗರ, ಮುಕ್ಕಚ್ಚೇರಿ, ಒಂಭತ್ತುಕೆರೆ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳು ಕೆಲವು ಮೀಟರುಗಳ ದೂರ ಮುಂದಕ್ಕೆ ಬಂದಿದೆ. ಕೆಲ ತೆಂಗಿನಮರಗಳನ್ನು ಸಮುದ್ರ ತನ್ನೊಳಗೆ ತೆಗೆದುಕೊಂಡು ನುಂಗಿ ಹಾಕಿದೆ. ಸೋಮೇಶ್ವರದ ಹಿಂದೂ ರುದ್ರಭೂಮಿಯ ದೊಡ್ಡದಾದ ತಡೆಗೋಡೆ ಕುಸಿದು ಕಾಣೆಯಾಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ಕರಾವಳಿಯ ವಿವಿಧೆಡೆ ಮಳೆಯಾಗುತ್ತಿದೆ. ಪುತ್ತೂರು ಸುಳ್ಯ ಮಂಗಳೂರು-ಉಡುಪಿ ಜೋರಾಗಿ ಮಳೆ ಬರುತ್ತಿದೆ.
ಸಮುದ್ರದ ಆಗ್ನೆಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 14 ರ ನಂತರ ಚಂಡಮಾರುತವಾಗಿ ಬದಲಾಗುವ ಮುನ್ಸೂಚನೆಯಿದ್ದು, ಜಿಲ್ಲೆಯ ಎಲ್ಲಾ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರದ ಕಡೆಗೆ ಬರದಿರುವಂತೆ ಎಚ್ಚರಿಕೆ ಮತ್ತು ರೆಡ್ ಅಲರ್ಟ್ ನೀಡಲಾಗಿದೆ.
ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡಲೇ ದಡಕ್ಕೆ ಮರಳುವಂತೆ ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಯಿಂದ ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.