ಈ ಬಾರಿ ಜೂನ್ 1 ರಂದೇ ಕರ್ನಾಟಕಕ್ಕೆ ಮುಂಗಾರು ಮಳೆಯ ಸಿಂಚನ
ಮುಂಗಾರು ಮಾರುತಗಳಿಗೆ ಈ ಬಾರಿ ಅವಸರ. ಹಾಗಾಗಿ ರಾಜ್ಯಕ್ಕೆ ವಾಡಿಕೆಗಿಂತ ಮುಂಚೆಯೇ ಮುಂಗಾರು ಮಳೆ ಪ್ರವೇಶಿಸಲಿವೆ. ಇದೇ ತಿಂಗಳ ಮೇ 31 ರಂದು ಕೇರಳಕ್ಕೆ ಮುಂಗಾರು ಮಳೆಹನಿಗಳು ನಿರಂತರ ಸಿಂಚನ ಎರಚಲಿವೆ. ನಂತರ ಮಾರುತಗಳು ಒಂದೊಮ್ಮೆ ಪ್ರಬಲವಾದರೆ ಬಹುತೇಕ ಅಂದೇ ಅಥವಾ ಜೂ.1 ರಂದು ಕರ್ನಾಟಕ ಪ್ರವೇಶಿಸಲಿವೆ. ವಾತಾವರಣ ಬದಲಾವಣೆಯಾದಲ್ಲಿ ಮಾತ್ರ, ಒಂದೆರೆಡು ದಿನ ತಡವಾಗಬಹುದು ಎಂದು ಹವಾಮಾನ ಇಲಾಖೆ ಹೇಳಿಕೆ ನೀಡಿದೆ.
ಸಾಮಾನ್ಯವಾಗಿ ಜೂನ್ 7 ರ ಸುಮಾರಿಗೆ ಮುಂಗಾರು ಕರ್ನಾಟಕ ಪ್ರವೇಶ ಮಾಡಿದರೆ ಕಳೆದ ಬಾರಿ ಜೂನ್ 4 ರಂದು ಮುಂಗಾರು ಪ್ರವೇಶಿಸಿತ್ತು. ಈ ಬಾರಿ ಜೂನ್ ಒಂದ ರಂದು ಮೇಘಗಳು ನೀರಾಗಿ ಹರಿಯಲಿವೆ.
ಈ ಬಾರಿ ಮುಂಗಾರು ಮಳೆ ರಾಜ್ಯದಲ್ಲಿ ಸಾಕಷ್ಟುಮಳೆ ಬೀಳಲಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿತ್ರದುರ್ಗದಲ್ಲಿ ಈ ಬಾರಿ ವಾಡಿಕ್ಕೆಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಳೆ ಬೀಳಲಿದೆ.
ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಬಳ್ಳಾರಿಯಲ್ಲಿ ವಾಡಿಕೆಯಷ್ಟೆ ಮಳೆಯಾಗಲಿದೆ ಎನ್ನಲಾಗಿದೆ.