” ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ಮಾಡಲಿ, ನೇಣು ಹಾಕಿಕೊಳ್ಳಬೇಕಾ ? ” | ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಬೇಜವಾಬ್ದಾರಿಯ ಹೇಳಿಕೆ
ಕೊರೋನಾ ತನ್ನ ರಣಕೇಕೆಯ ಮಧ್ಯೆ ಜನರು ವ್ಯಾಕ್ಸಿನ್ಗಾಗಿ ಪರದಾಡುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ. 18 ರ ಮೇಲಿನ ವಯಸ್ಕರಿಗೆ ಲಸಿಕೆ ನೀಡಲು ಬುಕ್ಕಿಂಗ್ ಪ್ರಾರಂಭಿಸಿದ ಸರಕಾರ, ಈಗ ಲಸಿಕೆಯ ಅಭಾವದಿಂದ ಲಸಿಕೆ ನೀಡುವುದರಿಂದ ಹಿಂದೆ ಸರಿದಿದೆ.
ಇಂತಹ ಸಂದಿಗ್ಧ ಶಾರ್ಟ್ ಸಪ್ಲೈ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರು ವ್ಯಾಕ್ಸಿನ್ಗೆ ಸಂಬಂಧಿಸಿದಂತೆ ಉಡಾಫೆಯ ಮತ್ತು ಬೇಜವಾಬ್ದಾರಿಯ ಮಾತೊಂದನ್ನು ಹೇಳಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ ವ್ಯಾಕ್ಸಿನ್ ಒದಗಿಸಿ ಎಂದು ಕೋರ್ಟ್ ಹೇಳುತ್ತದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ಮಾಡಲಿ, ನೇಣು ಹಾಕಿಕೊಳ್ಳಬೇಕಾ ? ‘ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ಲಸಿಕೆ ಒದಗಿಸಲು ತನ್ನ ಎಲ್ಲಾ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿ ಅವುಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ. ನಿರಂತರವಾಗಿ ಸಮಾಲೋಚನೆ ಮಾಡಿ ಮೋದಿ ಅವರು ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಲಸಿಕೆಯು ಒಂದು ಫಾರ್ಮಸ್ಯೂಟಿಕಲ್ ಉತ್ಪನ್ನ. ಅದನ್ನು ತಯಾರು ಮಾಡುವ ಸಂದರ್ಭ ಹತ್ತಾರು ಕಾನೂನು ಕಟ್ಟಳೆಗಳನ್ನು ಪಾಲಿಸಬೇಕಾಗುತ್ತದೆ. ಗುಡ್ ಮ್ಯಾನುಫ್ಯಾಕ್ಚರಿಂಗ್ ಪ್ರಾಕ್ಟೀಸ್ ಅನ್ನು ಪಾಲಿಸಿದ. ನಂತರವಷ್ಟೆ ತಯಾರಿಕೆ ಸಾಧ್ಯ. ಹಾಗಾಗಿ, ಲಸಿಕೆ ಉತ್ಪನ್ನ ಮಾಡಲು ತನ್ನದೇ ಆದ ಇತಿಮಿತಿಗಳು ಇವೆ. ಈಗ ತಾನೇ ಕೆಲ ತಿಂಗಳುಗಳ ಹಿಂದೆಯಷ್ಟೇ ತಯಾರಿಕೆ ಶುರುಮಾಡಿ ಕೊಂಡ ಕಂಪನಿಗಳು, ಈಗ ಉತ್ಪನ್ನ ಏರಿಸಿಕೊಳ್ಳುವ ( ಸ್ಕೇಲ್ ಅಪ್ ) ಮಾಡುವಲ್ಲಿ ನಿರತವಾಗಿವೆ.
ಹಾಗಂತ ಕೇಂದ್ರ ಕ್ಯಾಬಿನೆಟ್ ಸಚಿವರು, ‘ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ಮಾಡಲಿ, ನೇಣು ಹಾಕಿಕೊಳ್ಳಬೇಕಾ ? ‘ ಎಂದು ಬೇಜವಾಬ್ದಾರಿ ಉತ್ತರ ನೀಡಬಾರದಿತ್ತು.