ಕೋರೋನಾ ಪಾಸಿಟಿವ್ ಆದರೂ ಮದುವೆ ಊಟ ಸವಿಯಲು ಹೋದ ವಕೀಲ | ಕೋವಿಡ್ ನಿಯಮ ಉಲ್ಲಂಘನೆಗಾಗಿ ಕೇಸು ದಾಖಲು
ಬಂಟ್ವಾಳದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರೂ ಆತ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪ ವಕೀಲ ಒಬ್ಬರ ವಿರುದ್ಧ ಕೇಳಿಬಂದಿದೆ. ಅಲ್ಲದೆ, ಆತನ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಮಣಿನಾಲ್ಕೂರು ಗ್ರಾಮದ ಬೊಳ್ಳುಕಲ್ಲು ನಿವಾಸಿ, ನ್ಯಾಯವಾದಿ ರಾಜೇಶ್ ಪೂಜಾರಿ ಬೊಳ್ಳುಕಲ್ಲು ಎಂಬವರ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪ ಪ್ರಕರಣ ದಾಖಲಾಗಿದ್ದು, ಅವರಿಗೆ 3 ದಿನಗಳ ಹಿಂದೆ ಪಾಸಿಟೀವ್ ಬಂದಿತ್ತು.
ಕೋವಿಡ್ ನಿಯಮದಂತೆ ಮನೆಯಿಂದ ಹೊರ ಹೋಗದೆ ಹೋಂ ಐಸೋಲೇಷನ್ ನಲ್ಲಿ ಇರುವಂತೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಅವರಿಗೆ ಸೂಚನೆ ನೀಡಿದ್ದರು. ಆದರೆ ನಿನ್ನೆ ಕಾರ್ಕಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ರಾಜೇಶ್ ಪೂಜಾರಿ ಹಾಜರಿದ್ದರು ಎನ್ನಲಾಗಿದೆ. ಆ ಮೂಲಕ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಮತ್ತು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದ್ದಾರೆ ಎಂದು ಆರೋಪಿಸಲಾಗಿದೆ.
ನಿನ್ನೆ ಮಣಿನಾಲ್ಕೂರು ಗ್ರಾಮ ಪಂಚಾಯತ್ ಪಿ.ಡಿ.ಒ. ಮತ್ತು ಟಾಸ್ಕ್ ಫೋರ್ಸ್ ಸಮಿತಿಯವರಿಗೆ ರಾಜೇಶ್ ಅವ್ರು ಮನೆಯಲ್ಲಿ ಇಲ್ಲ. ಎಲ್ಲೋ ಹೊರಟಿದ್ದಾರೆ ಎಂಬ ಮಾಹಿತಿ ಬಂದಿತ್ತು. ತಕ್ಷಣ ತಂಡಗಳು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಬಳಿಕ ಸ್ಥಳೀಯ ಪಿ.ಡಿ.ಒ. ನೀಡಿದ ದೂರಿನ ಮೇರೆಗೆ ರಾಜೇಶ್ ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.