ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ V ಲಸಿಕೆಯ ಒಂದು ಡೋಸ್‍ಗೆ ಭಾರತದಲ್ಲಿ 995.40 ರೂ. ದರವನ್ನು ನಿಗದಿ | ಲಸಿಕೆ ಭಾರತದಲ್ಲಿ ಮಾರುಕಟ್ಟೆಗೆ

ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ V ಲಸಿಕೆಯ ಒಂದು ಡೋಸ್‍ಗೆ ಭಾರತದಲ್ಲಿ 995.40 ರೂ. ದರವನ್ನು ನಿಗದಿ ಮಾಡಲಾಗಿದೆ.

 

ಹೈದರಾಬಾದಿನ ರೆಡ್ಡೀಸ್ ಕಂಪನಿ ಈ ದರವನ್ನು ನಿಗದಿ ಮಾಡಿದ್ದು, ಇಂದು ಖಾಸಗಿ ಆಸ್ಪತ್ರೆಯಲ್ಲಿ ಮೊದಲ ಡೋಸ್ ನೀಡಲಾಗಿದೆ.  ರಷ್ಯಾದಿಂದ ಆಮದಾಗಿರುವ ಈ ಲಸಿಕೆಗೆ 948 ರೂ. ದರ ಇದ್ದು  ಶೇ.5 ಜಿಎಸ್‍ಟಿ ಸೇರಿಸಿದಾಗ ದರ 995 ರೂ. ಆಗುತ್ತದೆ. ಭಾರತದಲ್ಲಿ ಈ ಲಸಿಕೆ ತಯಾರಾದರೆ ದರ ಮತ್ತಷ್ಟು ಇಳಿಕೆಯಾಗಲಿದೆ.

ದೇಶದಲ್ಲಿ ಲಸಿಕೆಗೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಲಸಿಕೆಯನ್ನು ಮುಂದಿನ ವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು  ಕೇಂದ್ರ ಸರ್ಕಾರ ಗುರುವಾರ ತಿಳಿಸಿತ್ತು.

ಸ್ಪುಟ್ನಿಕ್ ಲಸಿಕೆ ದ್ರವ ಮತ್ತು ಪೌಡರ್ ಎರಡೂ ರೂಪದಲ್ಲಿ ಲಭ್ಯವಿದೆ. ದ್ರವ ರೂಪದ ಲಸಿಕೆಯನ್ನು ಮೈನಸ್ 18 ಡಿಗ್ರಿ, ಪೌಡರ್ ರೂಪದ ಲಸಿಕೆಯನ್ನು 2 ಮತ್ತು 8 ಡಿಗ್ರಿಯಲ್ಲಿ ಸಂಗ್ರಹ ಮಾಡಬೇಕಾಗುತ್ತದೆ.  ಲಸಿಕೆ ತಗೆದುಕೊಂಡ 3 ವಾರದ ಒಳಗಡೆ ಮತ್ತೊಮ್ಮೆ ಈ ಲಸಿಕೆಯನ್ನು ತೆಗದುಕೊಳ್ಳಬೇಕಾಗುತ್ತದೆ.

ಈ ಎರಡು ಲಸಿಕೆ ಹೋಲಿಸಿದರೆ ಸ್ಪುಟ್ನಿಕ್ ಲಸಿಕೆ ಶೇ.91 ರಷ್ಟು ಪರಿಣಾಮಕಾರಿ ಎಂಬ ವರದಿ ಪ್ರಕಟವಾಗಿದೆ.

ಕೊರೊನಾ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು.

2020ರ ಆಗಸ್ಟ್ ನಲ್ಲಿ ರಷ್ಯಾ ಈ ಲಸಿಕೆಯನ್ನು ಬಿಡುಗಡೆ ಮಾಡಿತ್ತು. ಕೊರೊನಾ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ಹೆಚ್ಚಿಸಲು ತಜ್ಞರ ಸಮಿತಿ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ  ಶಿಫಾರಸು ಮಾಡಿತ್ತು.

ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ  ರೆಡ್ಡೀಸ್ ಕಂಪನಿ ಜನರ ಮೇಲೆ ಪ್ರಯೋಗ ನಡೆಸಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಹೈದರಾಬಾದಿನ ರೆಡ್ಡೀಸ್ ಲ್ಯಾಬೋರೇಟರಿ, ಹೆಟೆರೊ ಬಯೋಫಾರ್ಮಾ, ಗ್ಲಾಂಡ್ ಫಾರ್ಮಾ, ಸ್ಟೆಲಿಸ್ ಬಯೋಫಾರ್ಮಾ ಹಾಗೂ ವಿಕ್ರೋ ಬಯೋಟೆಕ್ ಕಂಪನಿಗಳಲ್ಲಿ ಈಗಾಗಲೇ ತಯಾರಿಸಲಾಗುತ್ತಿದೆ. ವರ್ಷಕ್ಕೆ 85 ಕೋಟಿ ಸ್ಪುಟ್ನಿಕ್ ಲಸಿಕೆಯನ್ನು ತಯಾರಿಸುವ ಸಾಮರ್ಥ್ಯ ಭಾರತದ ವಿವಿಧ ಘಟಕಗಳಿಗಿರುವುದು ವಿಶೇಷ.

ಮಾಸ್ಕೋದಲ್ಲಿರುವ ಸೆಚನೋವ್ ವಿವಿಯ ಗಮಾಲಿಯಾ ಸಂಶೋಧನಾ ಕೇಂದ್ರ ಮತ್ತು ರಷ್ಯಾ ರಕ್ಷಣಾ ಸಚಿವಾಲಯ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.

Leave A Reply

Your email address will not be published.