ಕೋರೋನಾದ ಬಗ್ಗೆ ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ, ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳಿ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪು…!
‘ಕೊರೊನಾದಿಂದಾಗಿ ಜನರು ಸಾಯುತ್ತಿರುವ ದೃಶ್ಯಗಳಿಗೆ ನಿರ್ಬಂಧ ವಿಧಿಸಿ, ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ, ಕೋವಿಡ್‌ನಿಂದ ನರಳುವ ಸಾವಿನ ದೃಶ್ಯ ಪ್ರಸಾರವಾಗುತ್ತಿದ್ದು, ಇದರಿಂದ ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ’ ಇದಕ್ಕೆ ಕಡಿವಾಣ ಹಾಕಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ವ್ಯಕ್ತಿಯೊಬ್ಬರು ಕೋರಿದ್ದರು.
ದೃಶ್ಯ ಮಾಧ್ಯಮಗಳು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿವೆ. ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಅವು ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸುತ್ತಿದೆ ಎಂದು ಅರ್ಜಿದಾರರು ದೂರಿದ್ದರು. ಅಲ್ಲದೆ, ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕಾಯ್ದೆಯಡಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದರು.
ಇದರ ವಿಚಾರಣೆಯನ್ನ ಮುಖ್ಯ ನ್ಯಾಯಮೂರ್ತಿ ಎಎ ಫೇಸ್ಟುತ್ ಓಕ್ ನೇತೃತ್ವದ ಪೀಠ ಕೈಗೆತ್ತಿಕೊಂಡಿತ್ತು. ಕೋರ್ಟು, ” ರಿಮೋಟ್ ನಿಮ್ಮ ಕೈಯಲ್ಲಿಯೇ ಇರುವಾಗ ವೀಕ್ಷಕರಿಗೆ ಚಾನಲ್ ಬದಲಿಸುವ ಆಯ್ಕೆಯೂ ಇದೆಯಲ್ಲವೆ? ನಿಮಗೆ ಉತ್ತಮ ಎನಿಸಿರುವ ಚಾನೆಲ್ ನೋಡುವ ಅವಕಾಶವೂ ಇದೆಯಲ್ಲವೆ? ಹಾಗಿದ್ದ ಮೇಲೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸುವ ಚಾನೆಲ್‌ಗಳನ್ನೇ ನೋಡುವುದು ಸರಿಯಲ್ಲವಲ್ಲ ” ಎಂದು ಅಭಿಪ್ರಾಯ ಪಟ್ಟಿತು.
ಆದರೂ ನಿಮಗೆ ಮಾಧ್ಯಮಗಳ ವಿರುದ್ಧ ಹೀಗಿದ್ದ ಮೇಲೂ ಕ್ರಮ ತೆಗೆದುಕೊಳ್ಳಲು ಇಷ್ಟಪಟ್ಟರೆ ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಸೂಚಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.