ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ | 3 ಸಾವು, ಹಲವರ ಸ್ಥಿತಿ ಚಿಂತಾಜನಕ
ಆಂಧ್ರಪ್ರದೇಶದ ನೆಲ್ಲೂರು ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ ಸಂಭವಿಸಿದೆ. ಅಲ್ಲಿ ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ನೆಲ್ಲೂರಿನ ವಂಜಮೂರಿನ ವೆಂಕಟನಾರಾಯಣ ಆಕ್ಟಿವ್ ಫಾರ್ಮಾಸ್ಯುಟಿಕಲ್ ಇಂಗ್ರೆಡಿಯೆಂಟ್ ( ಡ್ರಗ್ ) ತಯಾರಿಕಾ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ವಿ. ಜಾಮೂರ್‌ನ ಶರೀಫ್, ಪಿ.ಸೀನು ಮತ್ತು ಚೌತಾ ಭೀಮಾವರಂನ ತಿರುಪಟಯ್ಯ ಎಂದು ಗುರುತಿಸಲಾಗಿದೆ.
ಘಟನೆ ನಡೆದ ಕೂಡಲೇ ಕಾರ್ಖಾನೆಯು ಕಾರ್ಮಿಕರನ್ನು ನೆಲ್ಲೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅವರಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದರೆ, ಮತ್ತೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದೆ ಕಾರ್ಖಾನೆಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಅಗ್ನಿ ಅವಘಡ ಉಂಟಾಗಿ ಇಬ್ಬರ ಸಾವು ಸಂಭವಿಸಿತ್ತು.