ಲಾಕ್ ಡೌನ್ ಗೆ ಉಡುಪಿ ಪೂರ್ತಿ ಸ್ತಬ್ಧ | ಮೀನು ಮಾರುಕಟ್ಟೆಯಲ್ಲಿ ಮಾತ್ರ ಬೆಳ್ ಬೆಳಿಗ್ಗೆ ಜೋರು ವ್ಯವಹಾರ
ಉಡುಪಿ ಲಾಕ್ ಡೌನ್ ಗೆ ಉತ್ತಮವಾಗಿ ಸ್ಪಂದಿಸಿದೆ.
ಬೆಳಗಿನ ಹೊತ್ತು ದಿನಸಿ ತರಕಾರಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಇತ್ತು. ತಳ್ಳುಗಾಡಿಯಲ್ಲಿ ಹಣ್ಣು-ಹಂಪಲು ಮಾರುವ ಗ್ರಾಹಕರು ಎಂದಿನಂತೆ ವ್ಯಾಪಾರದಲ್ಲಿ ಬ್ಯುಸಿ. ಜನರಲ್ಲಿ ಒಂದು ತರದ ಅವಸರ ಇತ್ತು. ಬೇಗ ಬೇಗ ವ್ಯಾಪಾರ ಮುಗಿಸಿ ಮನೆಗೆ ಹೋಗುವ ತವಕ ವ್ಯಾಪಾರಿಗಳದ್ದು. ದಿನಸಿ ಅಂಗಡಿ ಮಾಲೀಕರು ಆಗಾಗ ವಾಚ್ ಗಡಿಯಾರ ಗಮನಿಸುತ್ತಾ ಸಮಯಕ್ಕೆ ಸರಿಯಾಗಿ ಅಂಗಡಿ ಬಂದ್ ಮಾಡುವ ಉದ್ದೇಶ ಹೊಂದಿದ್ದರು. ಅಂತೆಯೇ ಸಮಯಕ್ಕೆ ಸರಿಯಾಗಿ ಅಂಗಡಿ ಬಂದ್ ಮಾಡಿದ್ದರು.
ಲಾಕ್ ಡೌನ್ ಇದ್ದರೂ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕೂಲಿ ಅರಸಿ ಯಥಾಪ್ರಕಾರ ಕಾದು ನಿಂತ ದೃಶ್ಯ ಕಂಡುಬಂತು. ಕಾರ್ಮಿಕರು ಎಂದಿನಂತೆ ಮಾಸ್ಕ್ ಧರಿಸದೆ ತಮ್ಮದೇ ಲೋಕದಲ್ಲಿ ಓಡಾಡುತ್ತಿದ್ದರು.
ಅತ್ತ ಉಡುಪಿಯ ಮೀನು ಮಾರುಕಟ್ಟೆಯಲ್ಲಿ ಕಲರವವೇ ಕಲರವ. ಭಾನುವಾರ ಆದುದರಿಂದ ವ್ಯಾಪಾರ ಜೋರು. ಜನ ಸಾಲು ಸಾಲು ವಾಹನಗಳಲ್ಲಿ ಬಂದು ಮೀನುಗಳನ್ನು ಖರೀದಿ ಮಾಡುತ್ತಿದ್ದಾರೆ. ಮದ್ಯದಂಗಡಿಯಲ್ಲಿ ಎಂದಿನಂತೆ ಕುಗ್ಗದ ಉತ್ಸಾಹ ಕಂಡುಬಂದಿದೆ.
ನಾಳೆ ಮೀನು ಮಾರುಕಟ್ಟೆಗಳು ಇರುವ ವ್ಯಾಪ್ತಿಯ ಜನ ನಾಳೆ ಕಾಲ್ನಡಿಗೆಯಲ್ಲೇ ಬಂದು ಬೆಳಗ್ಗೆ 10 ಗಂಟೆಯವರೆಗೆ ಮೀನು ಖರೀದಿ ಮಾಡಬಹುದು ಎಂದು ಮಾಹಿತಿ ನೀಡಲಾಗಿದೆ. ಮನೆಗಳಿರುವ ಏರಿಯಾ ಮತ್ತು ನಗರದ ಹೊರವಲಯಗಳಿಗೆ ನಾಳೆಯಿಂದ ದ್ವಿಚಕ್ರ ವಾಹನಗಳಲ್ಲಿ ಮೀನು ಸಾಗಾಟ ಮುಂದುವರೆಯಲಿದೆ.
ಒಟ್ಟಾರೆಯಾಗಿ ಉಡುಪಿ ಲಾಕ್ ಡೌನ್ ಗೆ ಸ್ಪಂದಿಸುತ್ತಲೇ ಬೆಳಗಿನ ಹೊತ್ತು ಒಂದಷ್ಟು ವ್ಯಾಪಾರ ಮಾಡಿಕೊಂಡಿದೆ.