ಪುತ್ತೂರು | ಕೊರಿಯರ್ ಮೂಲಕ ಬಂದ ಪಾರ್ಸೆಲ್ ಕೊಡದೆ ಅವಾಚ್ಯ ಶಬ್ದಗಳಿಂದ ವೈದ್ಯೆಗೆ ನಿಂದನೆ, ದೂರು ದಾಖಲು
ಕೊರಿಯರ್ ಮೂಲಕ ಬಂದ ಪಾರ್ಸೆಲ್ ಅನ್ನು ನೀಡದೆ ಇರುವ ಬಗ್ಗೆ ಪ್ರಶ್ನಿಸಲು ತೆರಳಿದ ಸಂದರ್ಭದಲ್ಲಿ ವೈದ್ಯೆಯೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ ಘಟನೆ ನಡೆದಿದೆ ಎಂದು ವೈದ್ಯ ಯೊಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರಿನ ವೈದ್ಯೆ ಚೇತನಾ ನೀಡಿದ ದೂರಿನ ಮೇಲೆ ಸುಳ್ಯದ ಗುತ್ತಿಗಾರು ನಿವಾಸಿಯಾಗಿರುವ, ಬನ್ನೂರಿನಲ್ಲಿರುವ ‘ಡೆಲಿವರಿ ಕೊರಿಯರ್ ಸಂಸ್ಥೆ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ವೈದ್ಯೆಯೊಬ್ಬರಿಗೆ ಅವರ ಸ್ನೇಹಿತರಿಂದ ಪಾರ್ಸೆಲ್ ಒಂದು ಬಂದಿತ್ತು. ಪಾರ್ಸೆಲ್ನ ಸರ್ವಿಸ್ ಮೊತ್ತವನ್ನು ಮೊದಲೇ ಪಾವತಿಸಲಾಗಿತ್ತು. ಎಪ್ರಿಲ್ 19ರೊಳಗೆ ಆ ಪಾರ್ಸೆಲ್ ವಾರಸುದಾರರಾದ ವೈದ್ಯೆಯನ್ನು ತಲುಪಬೇಕಿತ್ತು. ಆದರೆ ಪಾರ್ಸಲ್ ತಲುಪದೇ ಇದ್ದಾಗ, ಆನ್ಲೈನ್ನಲ್ಲಿ ಪರಿಶೀಲಿಸಿದಾಗ ‘ಡೆಲಿವರ್ಡ್ ಟು ಕಸ್ಟಮರ್’ ಎಂದು ಅದರಲ್ಲಿ ಷರಾ ಬರೆದಿತ್ತು. ವೈದ್ಯೆಯವರ ಸಹಿಯನ್ನು ಹಾಕಿ ಅದಾಗಲೇ ಕೊರಿಯರ್ ಪಾರ್ಸೆಲ್ನ್ನು ಸ್ವೀಕರಿಸಲಾಗಿತ್ತು.
ಈ ಬಗ್ಗೆ ವೈದ್ಯರು ಎಪ್ರಿಲ್ 19ರಂದು ಬನ್ನೂರಿನಲ್ಲಿರುವ ಡೆಲಿವರಿ ಸಂಸ್ಥೆಯ ಫ್ರಾಂಚೈಸಿಗೆ ತೆರಳಿ ಪ್ರಶ್ನಿಸಿದ್ದರು. ಈ ಸಂದರ್ಭ ಫ್ರಾಂಚೈಸಿ ಮಾಲಕ ರಾಜ ಮಾವಿನಕಟ್ಟೆ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಲ್ಲದೆ ಪಾರ್ಸೆಲ್ನ್ನು ನೀಡಲು ನಿರಾಕರಿಸಿದ್ದಾರೆ ಎನ್ನುವುದು ವೈದ್ಯೆಯ ದೂರು. ಆ ದೂರನ್ನು ಸ್ವೀಕರಿಸಿದ ಪುತ್ತೂರು ನಗರ ಠಾಣಾ ಪೊಲೀಸರು ರಾಜ ಮಾವಿನಕಟ್ಟೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದರೆ ಇನ್ನೊಂದು ಕಡೆ ಈ ದೂರು ದುರುದ್ದೇಶಪೂರ್ವಕವಾಗಿದೆ ಮತ್ತು ಹಳೆಯ ಮನಸ್ತಾಪಗಳ ಕಾರಣದಿಂದ ಸುಳ್ಳು ದೂರು ನೀಡಲಾಗಿದೆ ಎಂಬ ಮಾತು ಕೂಡ ಅಲ್ಲಲ್ಲಿ ಗುಸು ಗುಸು ಮಾತಾಗಿ ಕೇಳಿ ಬರುತ್ತಿದೆ. ಪೊಲೀಸರ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.