ಬಹರೈನ್ ನಿಂದ ಬಂದ ಆಕ್ಸಿಜನ್ ಸಿಲಿಂಡರ್ ವಾಪಸ್ ಕಳಿಸಬೇಕಾ ಮಿಸ್ಟರ್ ಖಾದರ್ ?! | ಖಾದರ್ Vs ವೇದವ್ಯಾಸ ಕಾಮತ್ ಟಿಟ್ ಫಾರ್ ಟಾ(ಟ್ವೀ)ಟ್ !!
ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಮತ್ತು ಮಾಜಿ ಸಚಿವ ಯು. ಟಿ ಖಾದರ್ ನಡುವೆ ನಡೆದ ಟ್ವಿಟರ್ ವಾರ್ ನಡೆದಿದೆ.
ಮಾಜಿ ಸಚಿವ ಯು. ಟಿ ಖಾದರ್ ರವರು ತಮ್ಮ ಟ್ವಿಟರ್ ನಲ್ಲಿ ‘ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚಬೇಕೋ ?’ ಎಂದು ವ್ಯಂಗ್ಯವಾಡಿದ್ದರು.
ಅದಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ‘ಮೆಚ್ಚಬೇಕು ನಿಮ್ಮ ಆತ್ಮನಿರ್ಭರತೆಯನ್ನು’ ಎಂದು ಟ್ವಿಟ್ ಮಾಡುವ ಮೂಲಕ ಖಾದರ್ ರವರಿಗೆ ತಿರುಗೇಟು ನೀಡಿದ್ದಾರೆ.
ಕಾರಣ ಇಷ್ಟೇ. ಬಹರೈನ್ ನಿಂದ ಬಂದ ಆಕ್ಸಿಜನ್ ಟ್ಯಾಂಕರ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಚಿತ್ರ ಕಂಡು “ಮಾಜಿ ಸಚಿವ ಯು.ಟಿ ಖಾದರ್ ಕೋಪಗೊಂಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ ಅವರು, “ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹರೈನ್ ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚ ಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ” ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಬಹರೈನ್ ಸೇರಿದಂತೆ ನಮ್ಮ ದೇಶದಿಂದ ಬೇರೆ ದೇಶಗಳಿಗೆ ವಾಕ್ಸಿನ್ ಕಳುಹಿಸಿದಾಗ ಜರೆದವರು ನೀವುಗಳಲ್ಲವೇ? ಈಗ ಬಹರೈನ್ ಪರವಾಗಿ ಚಪ್ಪಾಳೆ ತಟ್ಟುತ್ತಿದ್ದೀರಿ. ಮೆಚ್ಚಬೇಕು ನಿಮ್ಮ ಆತ್ಮನಿರ್ಭರತೆಯನ್ನು ” ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಮಾಜಿ ಸಚಿವ ಯು.ಟಿ ಖಾದರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಬಹರೈನ್ ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ನವಮಂಗಳೂರು ಬಂದರಿಗೆ ಬಂದಿದ್ದ ಐ ಎನ್ ಎಸ್ ತಲ್ವಾರ್ ಹಡಗನ್ನು ಬಿಜೆಪಿ ಶಾಸಕರ ತಂಡ ಸ್ವಾಗತಿಸಿದ ವಿಚಾರವಾಗಿ ಮಾಜಿ ಸಚಿವ ಯು.ಟಿ ಖಾದರ್ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಅಂದರೆ, ಮೋದಿಯವರು ಲಾಕ್ ಡೌನ್ ಘೋಷಣೆಯ ಸಂದರ್ಭ ಸ್ವದೇಶಿ ವಸ್ತುಗಳನ್ನು ಉತ್ಪಾದಿಸಬೇಕು ಹೇಳಿದ್ದನ್ನು ಟೀಕಿಸಿ, ಚಪ್ಪಾಳೆ ಹೊಡೆಯಬೇಕೋ ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ” ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಖಾದರ್ ಧಾಟಿಯಲ್ಲೇ ಖಾರವಾದ ತಿರುಗೇಟು ನೀಡಿರುವ ಶಾಸಕ ಕಾಮತ್ ” ಯು.ಟಿ ಖಾದರ್ ಅವರೇ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕಾರ್ಯಗಳ ಬಗ್ಗೆ ಮೊದಲು ತಿಳಿದುಕೊಳ್ಳಿರಿ. ಈಗಾಗಲೇ ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಹರೈನ್ ನಿಂದ ಆಕ್ಸಿಜನ್ ತುಂಬಿರುವ ಹಡಗು ಬಂದಾಗ ಈ ಭಾಗದ ಜನರ ಪ್ರತಿನಿಧಿಗಳಾಗಿ ಅದನ್ನು ಸ್ವಾಗತಿಸಿದ್ದೇವೆ. ನಮ್ಮ ದೇಶದಿಂದ ಬೇರೆ ದೇಶಗಳಿಗೆ (ಬಹರೈನ್ ಸೇರಿದಂತೆ) ವಾಕ್ಸಿನ್ ಕಳುಹಿಸಿದಾಗ ಜರೆರವರು ಇವರಲ್ಲವೇ? ಎಂದು ಪ್ರತಿಕ್ರಿಯಿಸಿದ್ದಾರೆ ವೇದವ್ಯಾಸ ಕಾಮತ್.
ಖಾದರ್ ಹೇಳಿದ್ದುದರಲ್ಲಿ ಅರ್ಥವಿದೆ. ಆತ್ಮ ನಿರ್ಭರತೆ ಮೋದಿ ಅವರು ಸಾರಿದಂತೆ ಅಗತ್ಯ. ನಮ್ಮಲ್ಲಿ ಇರುವ ವಸ್ತುಗಳನ್ನು ನಾವು ಬಳಸಬೇಕು ಅಥವಾ ನಮಗೆ ಬೇಕಾದದ್ದನ್ನು ನಾವು ತಯಾರಿ ಮಾಡಿಕೊಳ್ಳಬೇಕು. ಇದು ಆತ್ಮ ನಿರ್ಭರತೆಯ ಒಟ್ಟು ಅರ್ಥ.
ಆದರೆ ಖಾದರ್ ಅವರು ಹೇಳಿದ ಟೈಮಿಂಗ್ ಸರಿ ಇಲ್ಲ.
ದೇಶದಲ್ಲಿ ಆಮ್ಲಜನಕದ ತೀವ್ರ ಅಭಾವ ಸೃಷ್ಟಿಯಾಗಿ ಜನ ಜೀವ ವಾಯುವಿಗಾಗಿ ಹಾಹಾಕಾರ ಪಡುತ್ತಿರುವಾಗ, ಆಮ್ಲಜನಕದ ಸಿಲಿಂಡರುಗಳು ಬಹರೈನ್ ನಿಂದ ಬರಲಿ ಅಥವಾ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದಿಂದಲೇ ಬರಲಿ, ಜನರ ಜೀವ ಮುಖ್ಯ. ಜೀವ ಉಳಿಸುವ ಕಾರ್ಯ ಆಗಬೇಕು. ಹಾಗಾದಾಗ ಮಾತ್ರ ನಾವು ಚಪ್ಪಾಳೆತಟ್ಟಿ ಸಂಭ್ರಮಿಸಬಹುದು. ಅಷ್ಟಕ್ಕೂ ಬಹರೈನ್ ನಮ್ಮ ಶತ್ರು ರಾಷ್ಟ್ರವಲ್ಲ. ದುಬಾಯಿ ಬಹರೈನ್ ಮುಂತಾದುವುಗಳು ಮುಸ್ಲಿಂ ರಾಷ್ಟ್ರವಾಗಿದ್ದರೂ, ಅವೆಲ್ಲ ಭಾರತಕ್ಕೆ ತೀರ ಆತ್ಮೀಯ ಮಿತ್ರ ದೇಶಗಳು. ಭಾರತ ತನ್ನ ಸುತ್ತಮುತ್ತ, ಪಾಕಿಸ್ತಾನವು ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ವ್ಯಾಪಾರ-ವಹಿವಾಟು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಕೊಡುಕೊಳ್ಳುವಿಕೆಯ ಸಂಬಂಧ ನಿರಂತರವಾಗಿ ದೇಶ ದೇಶಗಳ ನಡುವೆ ನಡೆಯುತ್ತಲೇ ಇರುತ್ತದೆ. ಈಗ ಬಹರೈನ್ ನಿಂದ ಜೀವವಾಯು ಆಮ್ಲಜನಕ ಬಂದುದಕ್ಕೆ ಆತ್ಮ ನಿರ್ಭರತೆ ಯನ್ನು ಹೋಲಿಸಿ ಮಾತನಾಡಿದ ಖಾದರ್ ಅವರ ಟೈಮಿಂಗ್ ಸರಿ ಇಲ್ಲ. ಇನ್ನೊಂದು ಸಲ ಬೇರೊಂದು ವಸ್ತು ವಿಷಯಕ್ಕೆ ಇದೇ ತರಹದ ಟೀಕಿಸಿದ್ದರೆ ಆಗ ಅವರ ಟೀಕೆಗೆ ಒಂದು ಮಹತ್ವ ಕೊಡಬಹುದಿತ್ತು. ಭಾರತ ಇತ್ತೀಚೆಗಷ್ಟೇ ಹಲವು ಸಣ್ಣಪುಟ್ಟ ದೇಶಗಳಿಗೆ ಕೋರೋನಾ ಲಸಿಕೆಯನ್ನು ನೀಡಿ ಅಲ್ಲಿನ ಎಷ್ಟೋ ನಾಗರಿಕರ ಪ್ರಾಣ ಉಳಿಸುವಲ್ಲಿ ಸಹಾಯ ಮಾಡಿತ್ತು. ಬಹರೈನ್ ಕೂಡ ಅಂತಹ ಒಂದು ದೇಶ. ಅದೇ ಕೃತಜ್ಞತೆಯಿಂದ ಬಹರೈನ್ ಭಾರತಕ್ಕೆ ದೊಡ್ಡಮಟ್ಟದ ಆಕ್ಸಿಜನ್ ಸಿಲಿಂಡರ್ ಅನ್ನು ಕಳುಹಿಸಿಕೊಟ್ಟಿದೆ. ಇದು ಎರಡು ದೇಶಗಳ ಸಂಬಂಧ ವೃದ್ಧಿಗೆ ಅನುಕೂಲ ಮತ್ತು ಮುಖ್ಯವಾಗಿ ನಮ್ಮ ಇವತ್ತಿನ ಅತ್ಯಗತ್ಯ ಅವಶ್ಯಕತೆಯಾದ ಆಮ್ಲಜನಕದ ಪೂರೈಕೆ ವಿಷಯ. ಇದು ನೆರವೇರಿದಕ್ಕಾಗಿ ಚಪ್ಪಾಳೆ ತಟ್ಟದೆ ಬೇರೇನು ತಟ್ಟಲಿ ?!