‘ಬೆಡ್ ಬ್ಲಾಕ್ ದಂಧೆ’ಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೈವಾಡ ಶಂಕೆ
ಬಿಬಿಎಂಪಿಯ ದಕ್ಷಿಣ ವಲಯದ ವಾರ್ ರೂಂನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಬಯಲಿಗೆಳೆದಿದ್ದು,ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಈ ಬೆಳವಣಿಗೆಯ ನಡುವೆ ಸಂಸದ ತೇಜಸ್ವಿ ಸೂರ್ಯ ಅವರ ತಂಡದಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ಸತೀಶ್ ರೆಡ್ಡಿ ಅವರು ಈ ಬೆಡ್ ಬುಕಿಂಗ್ ದಂಧೆಯಲ್ಲಿದ್ದಾರೆ ಎಂದು ಬಲವಾದ ಆರೋಪಗಳು ಕೇಳಿಬಂದಿದೆ.
ಶಾಸಕ ಸತೀಶ್ ರೆಡ್ಡಿ ಅವರು ಆಸ್ಪತ್ರೆಯ ವಾರ್ ರೂಂನಲ್ಲಿ ತಮ್ಮ ಬೆಂಬಲಿಗರು ಹಾಗೂ ಏಜೆಂಟರನ್ನು ಇಟ್ಟು ತಮಗೆ ಬೇಕಾದವರಿಗೆ ಹಾಸಿಗೆಗಳನ್ನು ಬ್ಲಾಕ್ ಮಾಡಿಸುತ್ತಿದ್ದರು ಎನ್ನಲಾಗಿದೆ.
ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರೇ ವಾರ್ ರೂಮ್ ಮೂಲಕ ಪಾರದರ್ಶಕವಾಗಿ ಹಾಸಿಗೆ ಹಂಚಿಕೆ ಮಾಡುವುದಕ್ಕೆ ಅಡ್ಡಿಯಾಗಿದ್ದರು ಎಂಬ ಅಂಶ ಹೊರಬಿದ್ದಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗಳು ಖಾಲಿಯಾದ ಕೂಡಲೇ ತಮ್ಮ ಕಡೆಯವರ ಮೂಲಕ ಮಾಹಿತಿ ಪಡೆದುಕೊಂಡು ಆ ಹಾಸಿಗೆಗಳನ್ನು ಬೇರೆಯವರ ಹೆಸರಿನಲ್ಲಿ ಕಾಯ್ದಿರಿಸುತ್ತಿದ್ದರು.
ನಂತರ ತಮಗೆ ಬೇಕಾದವರಿಗೆ, ಕ್ಷೇತ್ರದವರಿಗೆ ಹಂಚಿಕೆ ಮಾಡಿಸುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು ಹಾಗೂ ಬಿಬಿಎಂಪಿ ನೌಕರರ ಜತೆ ಜಗಳ ಮಾಡುತ್ತಿದ್ದರು. ಬೊಮ್ಮನಹಳ್ಳಿ ಬಿಬಿಎಂಪಿ ವಲಯದ ವಾರ್ ರೂಮ್ನಿಂದ ಶೇ. 80ರಷ್ಟು ಹಾಸಿಗೆಗಳನ್ನು ಶಾಸಕರ ಬೆಂಬಲಿಗರೇ ಕಾಯ್ದಿರಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಶಾಸಕರ ಬೆಂಬಲಿಗರು ಹಾಗೂ ಏಜೆಂಟರು, ವಾರ್ ರೂಮ್ನಲ್ಲಿ ಠಿಕಾಣಿ ಹೂಡಿ ತಮಗೆ ಬೇಕಾದವರಿಗೆ ಬಿಬಿಎಂಪಿ ಕೋಟಾದ ಐಸಿಯು ಹಾಸಿಗೆಗಳನ್ನು ಹಂಚುತ್ತಿದ್ದರು.
ಆಸ್ಪತ್ರೆಗಳಲ್ಲಿ ಖಾಲಿಯಾಗುವ ಸಾಮಾನ್ಯ, ಐಸಿಯು, ವೆಂಟಿಲೇಟರ್ ಬೆಡ್ಗಳ ಮಾಹಿತಿಯನ್ನು ಸಿಎಚ್ಬಿಎಂಎಸ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲು ಆರೋಗ್ಯ ಮಿತ್ರ ಸಿಬ್ಬಂದಿಗೆ ಶಾಸಕರ ಬೆಂಬಲಿಗರು ಅವಕಾಶ ನೀಡುತ್ತಿರಲಿಲ್ಲ.
ತಕ್ಷಣವೇ ವಾರ್ ರೂಂನಲ್ಲಿರುವ ತಮ್ಮ ಕಡೆಯವರಿಗೆ ಹಾಸಿಗೆಗಳು ಖಾಲಿಯಾಗಿರುವ ಕುರಿತು ಮಾಹಿತಿ ನೀಡುತ್ತಿದ್ದರು.
ನಂತರ ಅವರು ಡೇಟಾ ಎಂಟ್ರಿ ಆಪರೇಟರ್ಗಳ ಮೂಲಕ ತಮಗೆ ಬೇಕಾದ ಸೋಂಕಿತರಿಗೆ ಬೆಡ್ಗಳನ್ನು ಬ್ಲಾಕ್ ಮಾಡಿಸುತ್ತಿದ್ದರು. ವಾರ್ ರೂಂಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಸೋಂಕಿತರ ಆರೋಗ್ಯ ಸ್ಥಿತಿ ಆಧರಿಸಿ, ಆಸ್ಪತ್ರೆಗೆ ದಾಖಲಿಸುವುದು, ಐಸಿಯು ಅಗತ್ಯವಿದೆಯೇ ಅಥವಾ ಮನೆ ಆರೈಕೆ ಸಾಕೇ ಎಂಬುದನ್ನು ತಿಳಿಸಬೇಕು. ಆದರೆ, ಬೊಮ್ಮನಹಳ್ಳಿ ವಲಯದ ವಾರ್ ರೂಂನಲ್ಲಿ ಇದಕ್ಕೆ ಅವಕಾಶವೇ ಇರಲಿಲ್ಲ.
ಶಾಸಕ ಸತೀಶ್ ರೆಡ್ಡಿ ಅವರು ಶಿಫಾರಸು ಮಾಡಿದವರಿಗೆ ಹಾಸಿಗೆಗಳನ್ನು ಒದಗಿಸಲಾಗುತ್ತಿತ್ತು. ಇದಕ್ಕೆ ವಾರ್ ರೂಂ, ಆರೋಗ್ಯ ಮಿತ್ರ ಸಿಬ್ಬಂದಿ ತಕರಾರು ತೆಗೆದರೆ, ಅವರ ಬಾಯಿ ಮುಚ್ಚಿಸಲಾಗುತ್ತಿತ್ತು ಎನ್ನಲಾಗಿದೆ.
ಬೊಮ್ಮನಹಳ್ಳಿ ವಲಯದ ಉಸ್ತುವಾರಿ ವಹಿಸಿಕೊಂಡಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಇತ್ತೀಚೆಗೆ ವಾರ್ ರೂಂಗೆ ಭೇಟಿ ನೀಡಿದಾಗ ಅನ್ಯ ವ್ಯಕ್ತಿಯೊಬ್ಬರು ಹಾಸಿಗೆಗಳನ್ನು ಬ್ಲಾಕ್ ಮಾಡಿಸುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಆ ವ್ಯಕ್ತಿಯನ್ನು ವಾರ್ ರೂಂನಿಂದ ಹೊರ ಹಾಕಲಾಗಿದೆ. ಈ ವಿಷಯ ತಿಳಿದ ಶಾಸಕರು ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ವಾರ್ ರೂಮ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ವಾರ್ ರೂಂನಲ್ಲಿ ತಮ್ಮವರು ಇರಲೇಬೇಕು ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜತೆ ಜಗಳ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಬೆಡ್ ಸಿಗದೆ ಜನಸಾಮಾನ್ಯರು ನರಕಯಾತನೆ ಅನುಭವಿಸುತ್ತಾ ಸಾಯುತ್ತಿರುವಾಗಲೂ ಶಾಸಕರ ಬೆಂಬಲಿಗರ ಆಟಾಟೋಪಕ್ಕೆ ಕಾರಣವಾಗಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಸತೀಶ್ ರೆಡ್ಡಿ,ವಾರ್ ರೂಂಗಳಲ್ಲಿಿ ನಮ್ಮ ಬೆಂಬಲಿಗರು ಕುಳಿತು ಹಾಸಿಗೆಗಳನ್ನು ಬ್ಲಾಕ್ ಮಾಡಿಸುತ್ತಿದ್ದರು ಎಂಬ ಆರೋಪದಲ್ಲಿ ಹುರುಳಿಲ್ಲ. ಸಹಾಯವಾಣಿಗೆ ಸಂಪರ್ಕ ಸಿಗದ ಸಂದರ್ಭದಲ್ಲಿ ನನಗೆ ಮತ್ತು ಕಚೇರಿಗೆ ಕರೆ ಮಾಡಿ ಸೋಂಕಿತರ ಸಂಬಂಧಿಕರು ಹಾಸಿಗೆ ಒದಗಿಸುವಂತೆ ಮನವಿ ಮಾಡಿಕೊಂಡವರಿಗೆ ಆದ್ಯತೆ ಮೇಲೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ನಮ್ಮ ಕಚೇರಿ ಸಿಬ್ಬಂದಿಯು ವಾರ್ ರೂಂಗೆ ಹೋಗಿ ಕೋರಿಕೊಂಡಿದ್ದಾರೆ.
ಕ್ಷೇತ್ರದಲ್ಲಿ 4 ದಿನದಲ್ಲಿ 17 ಮಂದಿ ಸಾವಿಗೀಡಾಗಿದ್ದರು. ಆ ಶವಗಳ ಅಂತ್ಯಕ್ರಿಯೆಗೆ ಚಿತಾಗಾರಕ್ಕೆ ಕೊಂಡೊಯ್ಯಲು ಆ್ಯಂಬುಲೆನ್ಸ್ಗಳು ಸಿಗಲಿಲ್ಲ. ಹೀಗಾಗಿ, ಎರಡು ದಿನ ಮನೆಯಲ್ಲಿಯೇ ಮೃತದೇಹಗಳನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ, ಹಾಸಿಗೆ ಹಾಗೂ ಆ್ಯಂಬುಲೆನ್ಸ್ಗಳ ವ್ಯವಸ್ಥೆ ಮಾಡುವಂತೆ ಏ. 30 ರಂದು ಪ್ರತಿಭಟನೆ ನಡೆಸಿದ್ದೇನೆ ಎಂದಿದ್ದಾರೆ.