ಭಾರತದ ಕೊರೋನಾ ಸಾವುಗಳನ್ನು ಅಣಕಿಸಿದ ಚೀನಾದ ಪೋಸ್ಟ್ ಗೆ ಅಲ್ಲಿನ ಜನತೆಯಿಂದಲೇ ತೀಕ್ಷ್ಣ ಪ್ರತಿಕ್ರಿಯೆ !!

ಭಾರತದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಅಣಕವಾಡಿ ಚೀನಾದ ಪ್ರಮುಖ ಕಾನೂನು ಜಾರಿ ಇಲಾಖೆಯೊಂದರ ಸಾಮಾಜಿಕ ಜಾಲತಾಣದ ಪೋಸ್ಟ್ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ವಿಶೇಷವೆಂದರೆ ಭಾರತವನ್ನು ಹಂಗಿಸಿದ ಆ ಪೋಸ್ಟ್ ಗೆ ಚೀನಾದಲ್ಲಿಯೇ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಟೀಕೆಗಳ ಸುರಿಮಳೆ ಬರುತ್ತಿದ್ದಂತೆ ಚೀನಾ ಆ ಪೋಸ್ಟ್ ಅನ್ನು ಅಳಿಸಿಹಾಕಿದೆ.

ಚೀನಾವು ಇತ್ತೀಚೆಗೆ ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಿದ ಮೊದಲ ಟಿಯಾಂಗೊಂಗ್ ನೌಕೆ ಹಾಗೂ ಭಾರತದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯಸಂಸ್ಕಾರದ ಚಿತ್ರಗಳನ್ನು ಹೋಲಿಕೆ ಮಾಡಿ ಚೀನಾದ ಸೆಂಟ್ರಲ್ ಪೊಲಿಟಿಕಲ್ ಮತ್ತು ಲೀಗಲ್ ಅಫೇರ್ಸ್ ಕಮಿಷನ್ ಎಂಬ ಸಂಸ್ಥೆ ತನ್ನ ಅಧಿಕೃತ ಸಿನೊ ವೀಬೋ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.
‘ಚೀನಾ ಬೆಂಕಿಯನ್ನು ಉರಿಸುವ ಬಗೆ ಮತ್ತು ಭಾರತ ಬೆಂಕಿ ಉರಿಸುವ ಬಗೆ’ ಎಂಬ ಶೀರ್ಷಿಕೆಯೊಂದಿಗೆ ಮಾಡಿದ ಪೋಸ್ಟ್ ಅದಾಗಿತ್ತು. ಈ ಪೋಸ್ಟ್ ಗೆ ಭಾರತದಲ್ಲಿನ ದೈನಂದಿನ ಕೋವಿಡ್ ಪ್ರಕರಣ 4 ಲಕ್ಷ ದಾಟಿದೆ ಎಂಬ ಹ್ಯಾಶ್‌ಟ್ಯಾಗ್ ಕೂಡ ಹಾಕಲಾಗಿತ್ತು.

ಈ ಪೋಸ್ಟ್ ಗೆ ಚೀನಾ ದೇಶದ ನೆಟ್ಟಿಗೆರೆ ಆಕ್ರೋಶ ಹೊರ ಹಾಕಿದ್ದರು. ಒಂದು ದೇಶದ ಜನ ಮಾರಣಾಂತಿಕ ಕಾಯಿಲೆಯಿಂದ ಸಾವನ್ನಪ್ಪುತ್ತಿರುವಾಗ ಅಣಕಿಸುವುದು ಎಷ್ಟು ಸರಿ. ಮನುಷ್ಯ ಸಂವೇದನಾಶೀಲರಾಗಿರಬೇಕು. ಇಂದು ಜಾಲತಾಣ ಬುದ್ಧಿ ಹೇಳಿದ್ದು, ಕೊನೆಗೆ ಇಲಾಖೆಯು ಆ ಪೋಸ್ಟ್ ಅನ್ನು ಅಳಿಸಿ ಹಾಕಿದೆ.

‘ ಚೀನಾದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಈ ಸಮಯದಲ್ಲಿ ಮಾನವೀಯತೆಯ ಮುಖವನ್ನು ಎತ್ತಿಹಿಡಿಯಬೇಕು. ಭಾರತದ ಕಡೆಗೆ ಅನುಕಂಪ ತೋರಿಸಬೇಕು ಹಾಗೂ ಚೀನಾದ ಸಮಾಜವನ್ನು ಉನ್ನತ ನೈತಿಕ ಸ್ಥಾನದಲ್ಲಿ ಇರಿಸಬೇಕು ‘ ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕ ಹು ಕ್ಸಿಜಿನ್, ವೀಬೋದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪೋಸ್ಟ್‌ಗೂ ಮುನ್ನ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಮತ್ತೊಂದು ಪೋಸ್ಟ್ ಕೂಡ ವಿವಾದ ಸೃಷ್ಟಿಸಿತ್ತು. ವುಹಾನ್‌ನಲ್ಲಿ ನಿರ್ಮಿಸಲಾಗಿದ್ದ ‘ಫೈರ್ ಗಾಡ್ ಮೌಂಟೇನ್’ ಹೆಸರಿನ ತುರ್ತು ಆಸ್ಪತ್ರೆಯ ಹೆಸರಿನೊಂದಿಗೆ ಭಾರತದಲ್ಲಿನ ಸಾಮೂಹಿಕ ಅಂತ್ಯಸಂಸ್ಕಾರದ ಫೋಟೊವನ್ನು ಹೋಲಿಸಲಾಗಿತ್ತು.

‘ಕೋವಿಡ್ ಪಿಡುಗಿನ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಚೀನಾ ಸರ್ಕಾರ ಮತ್ತು ಮುಖ್ಯವಾಹಿನಿ ಸಾರ್ವಜನಿಕರ ಅಭಿಪ್ರಾಯಕ್ಕೆ ಎಲ್ಲರೂ ಗಮನ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಭಾರತಕ್ಕೆ ಮತ್ತಷ್ಟು ನೆರವನ್ನು ಚೀನಾ ಸರ್ಕಾರ ಒದಗಿಸಲಿದೆ’ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.

ಚೀನಾ ಸರಕಾರದ ಯಾವುದೋ ಒಂದು ಇಲಾಖೆ ಭಾರತದ ಸಾವನ್ನು ಅಣಕಿಸಿ ಪೋಸ್ಟ್ ಮಮಾಡಿದರೂ, ಚೀನಾದ ಜನಸಾಮಾನ್ಯರು ಮತ್ತು ಪತ್ರಿಕೆಗಳು ಅದನ್ನು ವಿರೋಧಿಸಿ ಸಾವಿನಲ್ಲಿ ಸಂಭ್ರಮಿಸುವುದು ಬೇಡ ಎಂದು ಚೀನಾದ ಆಡಳಿತ ವ್ಯವಸ್ಥೆಗೆ ಬುದ್ಧಿ ಹೇಳಿದ್ದು ತುಂಬಾ ಒಳ್ಳೆಯ ಬೆಳವಣಿಗೆ. ಮತ್ತು, ಯಾವುದೇ ರಾಷ್ಟ್ರವಿರಲಿ, ಸರಕಾರಗಳು ದಾರಿ ತಪ್ಪಬಹುದು ; ಆದರೆ ಸಾಮಾನ್ಯ ಜನತೆ ಯಾವತ್ತೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತವೆ ಎಂಬುದನ್ನು ಇದು ಎತ್ತಿ ತೋರಿಸಿದೆ.

Leave A Reply

Your email address will not be published.