ಪಿಪಿಇ ಕಿಟ್ ಧರಿಸಿಯೇ ಅಂಬುಲೆನ್ಸ್ ಚಾಲಕ ಡಾನ್ಸ್ | ಆಸ್ಪತ್ರೆಯ ಮುಂದೆ ಮದುವೆಯ ದಿಬ್ಬಣ ಹೊರಟಿದ್ದಾಗ ತಂತಾನೇ ಹೆಜ್ಜೆ ಹಾಕಿದ ಕಾಲುಗಳು !
ಪ್ರತಿದಿನ ಮೊರೆಯುವ ಕೋರೋನಾ ರಣಕೇಕೆ ಮಧ್ಯೆ ವಾರಿಯರ್ಸ್ ಗಳಾದ ವೈದ್ಯರು, ನರ್ಸ್, ವಾರ್ಡ್ ಬಾಯ್ ಗಳು, ಅಂಬುಲೆನ್ಸ್ ಡ್ರೈವರ್ ಗಳು, ಪೊಲೀಸ್ ಅಧಿಕಾರಿಗಳು ಇತ್ಯಾದಿ ಜನರು ಅತ್ಯಂತ ಒತ್ತಡದ ಬದುಕು ಬದುಕುತ್ತಿದ್ದಾರೆ. ಇಂತಹ ಒತ್ತಡದ ನಡುವೆಯೂ ನಮ್ಮ ಕೊರೊನಾ ವಾರಿಯರ್ಸ್ ಶ್ರಮಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ವಿಶ್ರಾಂತಿಯೇ ಇಲ್ಲದೆ ಕೆಲಸ ನಿರ್ವಹಿಸುವ ಇವರುಗಳು ಒಂದಲ್ಲ ಒಂದು ಒತ್ತಡ ನಿವಾರಿಸಿಕೊಳ್ಳುವ ತಂತ್ರಕ್ಕೆ ಮೊರೆ ಹೋಗುತ್ತಾರೆ.
ಈ ಹಿಂದೆ ಕೆಲವು ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ತಮಗೆ ಸಿಗುವ ಅಲ್ಪಸ್ವಲ್ಪ ಬಿಡುವಿನ ಸಮಯದಲ್ಲಿ ಡಾನ್ಸ್ ಮಾಡುವ ಹಲವು ವಿಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇದೀಗ ಇಂತಹದ್ದೇ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ.
ಇಲ್ಲಿ ಆಂಬ್ಯುಲೆನ್ಸ್ ಚಾಲಕರೊಬ್ಬರು ಪಿಪಿಇ ಕಿಟ್ ಧರಿಸಿ ಡಾನ್ಸ್ ಮಾಡಿದ ವಿಡಿಯೋ. ಆಂದು ಆ ಆಸ್ಪತ್ರೆಯ ಎದುರು ಮದುವೆ ಮೆರವಣಿಗೆಯೊಂದು ಸಾಗುತ್ತಿತ್ತು. ಆಗ ಅಲ್ಲಿ ಹೊಮ್ಮಿದ ಮ್ಯೂಸಿಕ್ಗೆ ಈ ಚಾಲಕ ಮನಸೋ ಇಚ್ಚೆ ಸ್ಟೆಪ್ಸ್ ಹಾಕಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಮಹೇಶ್ ದಿಬ್ಬಣದ ಮೆರವಣಿಗೆಯಲ್ಲಿ ನೃತ್ಯ ಮಾಡಿದವರು. ಇವರು ಮೊನ್ನೆ ರಾತ್ರಿ ಉತ್ತರಾಖಂಡದ ಹಲ್ದ್ವಾನಿಯ ಸುಶೀಲಾ ತಿವಾರಿ ವೈದ್ಯಕೀಯ ಕಾಲೇಜಿನ ಸಮೀಪ ಸಾಗುತ್ತಿದ್ದ ದಿಬ್ಬಣದ ವೇಳೆ ಕುಣಿದಿದ್ದರು. ಈ ದೃಶ್ಯವನ್ನು ದಿಬ್ಬಣದಲ್ಲಿದ್ದ ಅತಿಥಿಯೊಬ್ಬರು ಸೆರೆ ಹಿಡಿದಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಮನಸ್ಸಿನ ಒತ್ತಡ ಕಳೆಯಲು ಈ ರೀತಿ ಕುಣಿದಿದ್ದಾಗಿ ಹೇಳಿಕೊಂಡಿದ್ದಾರೆ.