ಕರಾವಳಿಯ ವಿವಿಧೆಡೆ ಫೇಸ್(ಕ್) ಬುಕ್ ಕಳ್ಳರ ಕೈಚಳಕ | ನಕಲಿ ಖಾತೆಯಿಂದ ಆತ್ಮೀಯರಿಗೆ ಸಾಲದ ರಿಕ್ವೆಸ್ಟ್ ಮಾಡಿ ವಂಚನೆ
ಸುಳ್ಯ: ಕಳೆದ ನಾಲ್ಕೈದು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೇಸ್ಬುಕ್ ನಕಲಿ ಖಾತೆದಾರರು, ಹಲವರನ್ನು ವಂಚಿಸುವ ಪ್ರಯತ್ನ ಮಾಡುತ್ತಿದ್ದು ಕೆಲವರು ಮೋಸ ಹೋಗಿದ್ದು ಇನ್ನು ಕೆಲವರು ಜಾಗರೂಕತೆಯಿಂದ ಬಚಾವಾಗಿದ್ದಾರೆ.
ವಂಚಕರ ಜಾಲ ಕೆಲವು ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದು ಅದಕ್ಕೆ ಅದೇ ವ್ಯಕ್ತಿಗಳ ಯೂಸರ್ ನೇಮ್ ಮತ್ತು ಅದೇ ಡಿಸ್ಪ್ಲೇ ಪಿಚ್ಚರ್ ಅಳವಡಿಸಿ ಅವರಿಗೆ ಅತಿ ಆತ್ಮೀಯರು ಎನಿಸಿಕೊಂಡವರಿಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಮೆಸೇಜ್ ಮಾಡಿ ಯಾವುದೋ ಎಮರ್ಜೆನ್ಸಿ ಎಂದು ಹಣ ಕೇಳುತ್ತಾರೆ. ಗಣ್ಯ ವ್ಯಕ್ತಿಗಳು ಏನೋ ಅರ್ಜೆಂಟಾಗಿ ದುಡ್ಡು ಕೇಳುತ್ತಿದ್ದಾರೆ ಎಂದು ಹಣ ಕಳಿಸುವವರು ಇದ್ದಾರೆ. ಆ ಮೂಲಕ ಹಣ ಕೇಳಿ ವಂಚಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಸುಳ್ಯ ಸೇರಿದಂತೆ ಜಿಲ್ಲೆಯ ಕೆಲವೆಡೆ ಬೆಳಕಿಗೆ ಬಂದಿದ್ದು ಕೆಲವರು ವಂಚಕರ ಕೋರಿಕೆಯಂತೆ ಅವರು ಕಳುಹಿಸಿದ ಖಾತೆಗೆ ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾಯಿಸಿದ್ದಾರೆ. ಇನ್ನು ಕೆಲವರು ಫೋನ್ ಕರೆ ಮೂಲಕ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ ಪರೀಕ್ಷಿಸಲು ಮುಂದಾಗಿದ್ದಾರೆ. ಆಗ ಆ ಖಾತೆಗಳ ನಕಲಿತನ ಬಯಲಾಗಿದೆ.
ಸುಳ್ಯದಲ್ಲಿ ವಿದ್ಯಾರ್ಥಿ ಓರ್ವರಿಗೆ ತನ್ನ ಹಳೆಯ ಉಪನ್ಯಾಸಕರ ಹೆಸರಿನಲ್ಲಿ ತೆರೆಯಲಾದ ನಕಲಿ ಖಾತೆಯಿಂದ ಹಣ ಕಳುಹಿಸುವ ಕೋರಿಕೆ ಬಂದಿದ್ದು, ಉಪನ್ಯಾಸಕರ ತನ್ನಲ್ಲಿ ಸಾಲ ಕೇಳುತ್ತಿರುವುದರ ಬಗ್ಗೆ ಅನುಮಾನಗೊಂಡ ವಿದ್ಯಾರ್ಥಿ ಫೋನ್ ಕಾಲ್ ಮೂಲಕ ಉಪನ್ಯಾಸಕರನ್ನು ಸಂಪರ್ಕಿಸಿದ್ದು, ಆ ವೇಳೆ ಅದು ಫೇಕ್ ಅಕೌಂಟ್ ಎಂದು ಬೆಳಕಿಗೆ ಬಂದಿದೆ.
ಇದೀಗ ಜಿಲ್ಲೆಯಲ್ಲಿ ಕೆಲವರು ಇಂತಹ ವಂಚಕರು ಬಲೆಗೆ ಬಿದ್ದಿದ್ದು, ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ, ಇನ್ನು ಮುಂದೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.
ವರದಿ : ಧನುಶ್ ಕೆ.