ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳ ಮಾರಾಮಾರಿ | ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ನಡುವೆ ಪರಸ್ಪರ ಹಲ್ಲೆ
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ಹಲ್ಲೆ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಸಮೀರ್ ಎಂಬಾತ ಜೈಲಿನಲ್ಲಿದ್ದ ಇತರ ವಿಚಾರಣಾಧೀನ ಕೈದಿಗಳಿಗೆ ಹಲ್ಲೆ ನಡೆಸಿದ್ದಾನೆ. ಮುಲ್ಕಿ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಅನ್ಸಾರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಮಾರಾಮಾರಿ ನಡೆದಿದ್ದು ಸಮೀರ್ ಸ್ಟೀಲ್ ಚಮಚ ಮತ್ತಿತರ ಅಡುಗೆ ಸಾಮಗ್ರಿಗಳನ್ನು ಬಳಸಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಅನ್ಸಾರ್ ಮತ್ತು ಮೂಡುಬಿದ್ರೆ ದರೋಡೆ ಪ್ರಕರಣದ ಜೈನುದ್ದೀನ್ ಎಂಬಾತ ಕೂಡ ಗಾಯಗೊಂಡಿದ್ದಾನೆ.
ಜೈಲಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಹಲ್ಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಗಾಯಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.