ಉದ್ಯಮಿ ಇಂದ್ರಾಳಿ ಭಾಸ್ಕರ ಶೆಟ್ಟಿ ಕೊಲೆಗೈದು ಹೋಮಕುಂಡದಲ್ಲಿ ಸುಟ್ಟ ಪ್ರಕರಣ | ಮೇ 29ರಂದು ಅಂತಿಮ ತೀರ್ಪು ಪ್ರಕಟ

Share the Article

ತೀವ್ರ ಕುತೂಹಲ ಮತ್ತು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉದ್ಯಮಿ ಉಡುಪಿ ಇಂದ್ರಾಳಿಯ ಭಾಸ್ಕರ್ ಶೆಟ್ಟಿ(52)ಯನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣದ ವಾದ ಪ್ರತಿವಾದ ಪೂರ್ಣಗೊಂಡಿದ್ದು, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಂತಿಮ ತೀರ್ಪನ್ನು ಮೇ 29ರಂದು ಪ್ರಕಟಿಸಲಿದೆ.

2021ರ ಮಾ.30ರಿಂದ ಆರಂಭದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಅಂತಿಮ ವಾದ ಮಂಡಿಸಿದ್ದರೆ, ನಂತರ ಆರೋಪಿಗಳ ಪರ ವಕೀಲರು ಪ್ರತಿವಾದವನ್ನು ಮಂಡಿಸಿದ್ದರು.

ವಾದ ಪ್ರತಿವಾದವನ್ನು ಆಲಿಸಿರುವ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್., ಅಂತಿಮ ತೀರ್ಪನ್ನು ಮೇ 29ರಂದು ಪ್ರಕಟಿಸುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ಹಾಜರಿದ್ದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ದೊರೆತರೆ, ಮಗ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್ ಬೆಂಗಳೂರು ಜೈಲಿನಲ್ಲಿದ್ದಾರೆ. ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ವಿಚಾರಣೆ ಮಧ್ಯೆ ಅನಾರೋಗ್ಯದಿಂದ ಮೃತಪಟ್ಟರೆ, ರಾಘವೇಂದ್ರ ಜಾಮೀನು ಪಡೆದುಕೊಂಡಿದ್ದಾರೆ.

ಆರೋಪಿಗಳು 2016ರ ಜು.28ರಂದು ಮಧ್ಯಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಡಲಾಗಿತ್ತು.

ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಈ ಕೊಲೆ ಬೆಳಕಿಗೆ ಬಂತು. ಆ.7ರಂದು ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತ್‌ನನ್ನು ಮತ್ತು ಆ. 8ರಂದು ನಿರಂಜನ್ ಭಟ್ ನನ್ನು ಪೊಲೀಸರು ಬಂಧಿಸಿದ್ದರು.

Leave A Reply

Your email address will not be published.