ರಾಜ್ಯದ 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ | ಕರಾವಳಿಯಲ್ಲಿ ಮುಂದುವರಿಯಲಿದೆ ಇನ್ನೆರಡು- ಮೂರು ದಿನ ಮಳೆ
ರಾಜ್ಯದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಹಳದಿ ಬಾವುಟ ಪ್ರದರ್ಶಿಸಿದೆ (ಯೆಲ್ಲೋ ಅಲರ್ಟ್ ಘೋಷಿಸಿದೆ)
ಅದರಂತೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ.
ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ರಾಜ್ಯದ ಉತ್ತರ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಉಡುಪಿಯ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ
ದಕ್ಷಿಣ ಕನ್ನಡದ ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳ, ಮಂಗಳೂರಿನ ಹಲವು ಕಡೆ ಸಣ್ಣ ಮಳೆ ಸುರಿದಿದೆ.
ಉಡುಪಿಯ ವಿವಿಧ ಭಾಗಗಳಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ಹೊತ್ತಿಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು, ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಉಡುಪಿಯ ಕಟಪಾಡಿ, ಕಾಪು, ಪಡುಬಿದ್ರಿ, ಕುಂದಾಪುರದ ಮಡಾಮಕ್ಕಿ, ಶೇಡಿಮನೆ, ಭಾಗದಲ್ಲಿ ಮಳೆಯಾಗಿದೆ.
ಏಪ್ರಿಲ್ 25ರವರೆಗೂ ರಾಜ್ಯದಲ್ಲಿ ಮಳೆ
ಏಪ್ರಿಲ್ 25ರವರೆಗೆ ಹಗುರದಿಂದ ಕೂಡಿದ ಸಾಧಾರಣ ಪ್ರಮಾಣದ ಮಳೆ ರಾದ್ಯಾದ್ಯಂತ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕೂಡ ನಿನ್ನೆ ಹಲವೆಡೆ ಮಳೆ ಸುರಿದಿದೆ. ಮತ್ತಷ್ಟು ದಿನ ಮಳೆ ಸುರಿಯುವ ಲಕ್ಷಣಗಳಿವೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಇಂದು ಕರಾವಳಿಯಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆ ಸುರಿಯಲಿದೆ. ನಿನ್ನೆ ಶಿರಾಡಿಯಲ್ಲಿ 4 ಸೆಂ,ಮೀ, ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ 3 ಸೆಂ,ಮೀ, ಶಿವಮೊಗ್ಗ ಜಿಲ್ಲೆಯ ತ್ಯಾಗರ್ತಿಯಲ್ಲಿ 4 ಸೆಂ,ಮೀ ಮಳೆಯಾಗಿದೆ.