ಪ್ರಿಯತಮೆಗೆ ಗಿಫ್ಟ್ ಕೊಡಲು ಹುಂಡಿ ಕಳವಿಗೆ ಯತ್ನಿಸಿದ | ಪರಾರಿ ಯತ್ನದಲ್ಲಿ ಕಾರು ಬಿಟ್ಟು ಹೋಗಿದ್ದ ಈತ ಈಗ ಪೊಲೀಸರ ಅತಿಥಿ
ಉಡುಪಿ:ಪ್ರಿಯತಮೆಗೆ ಉಡುಗೊರೆ ಕೊಡಲು ಹಾಗೂ ಸುತ್ತಾಡಲು ಬೇಕಾಗಿ ದೇವಸ್ಥಾನದ ಹುಂಡಿ ಕಳವಿಗೆ ಯತ್ನಿಸಿದ ಪ್ರಿಯಕರನನ್ನು ಪೊಲೀಸರು ಬಂಧಿಸಿದ ಬಗ್ಗೆ ವರದಿಯಾಗಿದೆ.
ಉಡುಪಿ- ಅಂಬಾಗಿಲು ಮುಖ್ಯರಸ್ತೆಯಲ್ಲಿರುವ ತಾಂಗದಗಡಿ ಶ್ರೀ ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ಏ.16 ರಂದು ವಿಫಲ ಯತ್ನ ನಡೆಸಲಾಗಿತ್ತು.
ಪ್ರಕರಣದ ಆರೋಪಿಯನ್ನು ಪೊಲೀಸರು ಮಂಗಳೂರಿನ ಮೂಡುಶೆಡ್ಡೆ ಗ್ಯಾಸ್ ಗೋಡೌನ್ ಸಮೀಪ ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ವಾಸವಿರುವ ರಾಂಚಿ ಮೂಲದ ಆರ್ಶಿತ್ ಅವಿನಾಶ್ ಡೋಡ್ರೆ(18) ಎಂಬವನೇ ಬಂಧಿತ ಯುವಕ.
ಪೊಲೀಸರ ತನಿಖೆ ವೇಳೆ ಈತ ತನ್ನ ಪ್ರಿಯತಮೆಯೊಂದಿಗೆ ಸುತ್ತಾಡಲು ಹಾಗೂ ಆಕೆಗೆ ಉಡುಗೊರೆ ನೀಡಲು ಹಣದ ಅಗತ್ಯವಿದ್ದ ಕಾರಣ ಈ ಕಳ್ಳತನಕ್ಕೆ ಪ್ರಯತ್ನಿಸಿದೆ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏ.16ರಂದು ಶ್ರೀ ವೀರಾಂಜನೇಯ ದೇಗುಲದ ಕಾಣಿಕೆ ಡಬ್ಬಿ ಕಳವಿಗೆ ಯತ್ನಿಸುತ್ತಿರುವಾಗ ಸ್ಥಳೀಯರು ಈತನನ್ನು ಹಿಡಿಯಲು ಪ್ರಯತ್ನಿಸಿದ್ದರು. ಈ ಸಂದರ್ಭ ಆತ ತಪ್ಪಿಸಿಕೊಳ್ಳುವ ಭರದಲ್ಲಿ ತಾನು ಬಂದಿದ್ದ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದನು.
ಕಾರಿನ ಜಾಡು ಹಿಡಿದು ಹೋದ ಪೊಲೀಸರು ಕಾರಿನ ಆರ್.ಸಿ. ಮಾಲೀಕ ಸೌರಭ್ ಜೈನ್ ಅವರನ್ನು ವಿಚಾರಿಸಿದಾಗ ಅವರು ಪ್ರೀತಂ ಅವರ ಕಾರ್ ಲಿಂಕ್ಸ್ ಗೆ ತನ್ನ ಕಾರನ್ನು ಬಾಡಿಗೆಗೆ ನೀಡಿದ ವಿಷಯ ತಿಳಿಸಿದ್ದರು.
ಪ್ರೀತಂ ಅವರಿಂದ ಕಾರು ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಸೆರೆ ವಿಧಿಸಲಾಗಿದೆ.