ಸರ್ಕಾರದ ಕಠಿಣ ಕ್ರಮಕ್ಕೆ ಕೆಎಸ್‌ಆರ್‌ಟಿಸಿ ನೌಕರ ಮೆತ್ತಗೆ | ಮಂಗಳೂರಿನಲ್ಲಿ 400ಕ್ಕೂ ಅಧಿಕ ಬಸ್ಸುಗಳು ರೋಡಿಗಿಳಿದು ಸಂಚಾರ
ಆರನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಬಸ್ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದ ಬಿಸಿ ನಿಧಾನಕ್ಕೆ ಎಲ್ಲೆಡೆ ಇಳಿಯುತ್ತಿದೆ. ದ.ಕದಲ್ಲಿ ಇದು ಇನ್ನಷ್ಟು ಬೇಗ ಇಳಿಕೆಯಾಗುತ್ತಿದೆ. ಇದಕ್ಕೆ ಸೂಚನೆಯೆಂಬಂತೆ ಶುಕ್ರವಾರ 400 ಕ್ಕೂ ಅಧಿಕ ಬಸ್‌ಗಳು ಮಂಗಳೂರು ಎರಡು ಡಿಪೋಗಳಿಂದ ನಾನಾ ರೂಟ್‌ಗಳಿಗೆ ಹೊರಟಿವೆ, 900ಕ್ಕೂ ಅಧಿಕ ಮಂದಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸರ್ಕಾರದ ಬಿಗಿ ನಿಲುವು ಮತ್ತು ಕೊರೋನಾ ಸಮಯದಲ್ಲಿ ಮುಷ್ಕರ ಹೂಡಿದ ಕಾರಣ ಇನ್ನಷ್ಟು ದಿನ ಮುಷ್ಕರ ನಡೆಸಿದರೂ ಏನೂ ಉಪಯೋಗ ಆಗುವುದು ಈಗ ಅಸಾದ್ಯ ಎಂದು ಮನವರಿಕೆ ಆಗಿದೆ ಎನ್ನಲಾಗಿದೆ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಸುಮಾರು 310 ಅನುಸೂಚಿಗಳಲ್ಲಿ ಬಸ್ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ ಸಾರಿಗೆ, ರಾಜಹಂಸ, ನಾನ್ ಎಸಿ ಸ್ಲೀಪರ್, ವೋಲ್ವೋ, ವೋಲ್ವೋ ಮಲ್ಟಿ ಆಕ್ಸೆಲ್, ಡ್ರೀಮ್ ಕ್ಲಾಸ್ ಒಳಗೊಂಡಂತೆ ವಿವಿಧ ಮಾದರಿಯ ಬಸ್ ಕಾರ್ಯಾಚರಿಸಿದೆ.
ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿ ಮುಷ್ಕರ ನಿರತ ಮಂಗಳೂರು ವಿಭಾಗದ 12 ಕೆಎಸ್‌ಆರ್‌ಟಿಸಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, 20ಕ್ಕೂ ಅಧಿಕ ಮಂದಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಮುಷ್ಕರ ನಿರತ ನೌಕರರ ಮೇಲೆ ಸರಕಾರ ಕಠಿಣ ಕ್ರಮ ಜರುಗಿಸುತ್ತಲೇ ಎಚ್ಚೆತ್ತುಕೊಂಡ ಇತರ ನೌಕರರು ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.