ಬಂಟ್ವಾಳ :  ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು, ಒಂದು ಮನೆಯಿಂದ ನಗದು ಕಳವು

Share the Article

ಮನೆಮಂದಿ ನಾಟಕ ವೀಕ್ಷಣೆಗೆಂದು ತೆರಳಿದ್ದ ಸಂದರ್ಭ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ ನಗದು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆಯಲ್ಲಿ ಗುರುವಾರ ನಡೆದಿದೆ.

ತುಂಬೆ ಗ್ರಾಮದ ಮಜಿ ಎಂಬಲ್ಲಿ ಕಳೆದ ರಾತ್ರಿ ನಾಲ್ಕು ಮನೆಗಳಿಗೆ ನುಗ್ಗಿರುವ ಕಳ್ಳರು ಒಂದು ಮನೆಯಿಂದ 8 ಸಾವಿರ ರೂ. ನಗದನ್ನು ದೋಚಿದ್ದಾರೆ. ಇನ್ನುಳಿದ ಮೂರು ಮನೆಯ ಕಪಾಟು ಸಹಿತ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿದ್ದು, ನಗದು ಸಹಿತ ಬೆಲೆಬಾಳುವ ಯಾವುದೇ ವಸ್ತುಗಳು ಸಿಗದ ಕಾರಣ ಬರಿ ಕೈಯಲ್ಲಿ ವಾಪಸ್ಸಾಗಿದ್ದಾರೆ.

ಮಜಿ ನಿವಾಸಿ ಮನೋಜ್ ಕೊಟ್ಟಾರಿ ಎಂಬವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಎಂಟು ಸಾವಿರ ರೂ. ನಗದನ್ನು ಕಳವು ಮಾಡಿದ್ದಾರೆ. ಭಾಸ್ಕರ, ರಾಘವ, ಮಾಧವ ಎಂಬವರ ಮನೆಗೂ ನುಗ್ಗಿ ಮನೆಯನ್ನು ಜಾಲಾಡಿದ್ದಾರೆ.

ತುಂಬೆ ಮಜಿಯಲ್ಲಿ ನಿನ್ನೆ ರಾತ್ರಿ ‘ಶಿವದೂತ ಗುಳಿಗ’ ಎಂಬ ನಾಟಕ ಪ್ರದರ್ಶನ ನಡೆದಿತ್ತು. ಈ ಪರಿಸರದ ಬಹುತೇಕ ಮನೆಯವರು ನಾಟಕ ವೀಕ್ಷಿಸಲು ಮನೆಗೆ ಬೀಗ ಹಾಕಿ ತೆರಳಿದ್ದರು. ನಾಟಕ ವೀಕ್ಷಿಸಿ ಮನೆಗೆ ವಾಪಸ್ ಆದಾಗ ಮನೆಯ ಬೀಗ ಮುರಿದು ಮನೆಗೆ ಪ್ರವೇಶ ಮಾಡಿರುವುದು ಗಮನಕ್ಕೆ ಬಂದಿದೆ.

ಸ್ಥಳಕ್ಕೆ ಬಂಟ್ವಾಳ ಎಸ್.ಐ. ಪ್ರಸನ್ನ, ಅಪರಾಧ ವಿಭಾಗದ ಎಸ್.ಐ. ಸಂಜೀವ, ಎಚ್.ಸಿ. ಸುರೇಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave A Reply