ವಿಕಲಚೇತನರಿಗೆ ಸಿಗುವ ಸೌಲಭ್ಯ ಕಸಿದುಕೊಳ್ಳಲು ರಾಜಕೀಯ ಪ್ರಯತ್ನ
ಪುತ್ತೂರು : ಕಳೆದ ನಾಲ್ಕು ವರ್ಷಗಳ ಹಿಂದೆ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ನಾನು ಮರದಿಂದ ಬಿದ್ದ ಪರಿಣಾಮ ಪೈನಲ್ಕಾರ್ಡಿಗೆ ಪೆಟ್ಟುಬಿದ್ದು ಸೊಂಟದಿಂದ ಕೆಳಭಾಗಕ್ಕೆ ಸ್ಪರ್ಶ ಜ್ಞಾನ ಇಲ್ಲದಂತಾಗಿದೆ. ಸದಾ ಹಾಸಿಗೆಯಲ್ಲಿಯೇ ಬದುಕು ಸವೆಸುತ್ತಿರುವ ನನಗೆ ನಾಲ್ಕೂವರೆ ವರ್ಷದ ಪುಟ್ಟ ಮಗು ಇದೆ. ನನಗೆ ಅಂಗವಿಕಲ ಸೌಲಭ್ಯಕ್ಕೆ ಸಿಗದಂತೆ ಮಾಡಲು`ರಾಜಕೀಯ’ ನಡೆಸಲಾಯಿತು.
ಕೊನೆಗೆ ಲೋಕಾಯುಕ್ತ ಇಲಾಖೆಯ ಮೂಲಕ ನಾನು ನಡೆಸಿದ ಕಾನೂನು ಹೋರಾಟದಿಂದ ಸೌಲಭ್ಯ ಪಡೆದುಕೊಂಡಿದ್ದೇನೆ. ನನ್ನಂತಹ ಶಾಶ್ವತ ಅಂಗವಿಕಲ ವ್ಯಕ್ತಿ ಜತೆ ರಾಜಕೀಯ ಜಿದ್ದು ತೋರ್ಪಡಿಸುವ ವ್ಯಕ್ತಿಗಳಿಗೆ ಇದು ಪಾಠವಾಗಬೇಕು- ಇದು ಕಾಣಿಯೂರು ಗ್ರಾಪಂ ವ್ಯಾಪ್ತಿಯ ಚಾರ್ವಾಕ ಬೀರೋಳಿಗೆ ನಿವಾಸಿ ಯತೀಂದ್ರ ಗೌಡ ಬಿ.ಎಲ್ ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಿಕಲಚೇತನರಿಗೆ ಸಿಗುವ ಸೌಲಭ್ಯವನ್ನು ಕಸಿದುಕೊಳ್ಳಲು ಪ್ರಯತ್ನ ಮಾಡುವ ಕೆಲ ಗ್ರಾಪಂ ಸದಸ್ಯರು ಇನ್ನಾದರೂ ಇಂತಹ ರಾಜಕೀಯ ಮಾಡಲು ಹೋಗಬಾರದು. ಇದು ಮಾನವೀಯತೆ ಮೀರಿದ ವರ್ತನೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು ಯಾವ ಅಂಗವಿಕಲರಿಗೂ ಇಂತಹ ಕಾನೂನು ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಬಾರದು ಎಂಬವುದೇ ನನ್ನ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಕಾಣಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಶಾಶ್ವತ ಅಂಗವಿಕಲನಾಗಿದ್ದ ನನಗೂ ಸೌಲಭ್ಯ ನೀಡಲು ಗ್ರಾಪಂ ತೀರ್ಮಾನಿಸಿ ಕ್ರಮ ಕೈಗೊಂಡಿದ್ದರು. ಸ್ವತಹ ಗ್ರಾಪಂ ಅಧ್ಯಕ್ಷರೇ ನನ್ನ ಹೆಸರು ಪ್ರಸ್ತಾಪಿಸಿ ಸೌಲಭ್ಯ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಿದ್ದರು. ಆದರೆ ಇದಕ್ಕೆ ಗ್ರಾಪಂ ಸದಸ್ಯ ಗಣೇಶ್ ಕೆ.ಎಸ್ ಎಂಬ ಸದಸ್ಯರು ಅಡ್ಡಗಾಲು ಹಾಕಿದರು. ಈ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಾನು ದೂರು ನೀಡಿದೆ. ಪತ್ರಿಕೆ ಮೂಲಕ ಯತೀಂದ್ರ ಗೌಡ ಅವರಿಗೆ ಅಂಗವಿಕಲ ಸೌಲಭ್ಯ ನೀಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದರು. ಗ್ರಾಪಂ ಸದಸ್ಯನ ಈ ಹೇಯ ಕೃತ್ಯದ ವಿರುದ್ಧ ಮೇಲಾಧಿಕಾರಿಗಳಿಗೆ ನಾನು ದೂರು ನೀಡಿದೆ. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಕೊನೆಗೆ ಲೋಕಾಯುಕ್ತಕ್ಕೆ ಸ್ಥಳೀಯ ವ್ಯಕ್ತಿಯೊಬ್ಬರ ಮೂಲಕ ದೂರು ಸಲ್ಲಿಸಿದೆ. ಇದರ ಪರಿಣಾಮ ಕಾನೂನು ಹೋರಾಟ ನಡೆಸಿ ಸೌಲಭ್ಯ ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಯಾವ ಅಂಗವಿಕಲನಿಗೂ ಇಂತಹ ಪರಿಸ್ಥಿತಿ ಸ್ಥಳೀಯ ರಾಜಕೀಯ ಹೆಸರಲ್ಲಿ ಮಾಡಬಾರದು ಎಂದು ಅವರು ಹೇಳಿದರು.