ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಬಗ್ಗೆ ವಿಶೇಷ ಲೇಖನ : ಹರೀಶ್ ಪುತ್ತೂರು
ಸುತ್ತಮುತ್ತಲು ನೋಡಿದರೆ ಹಚ್ಚ ಹಸುರಿನಿಂದ ಕೂಡಿದ ಪ್ರಕೃತಿಯ ಸೊಬಗು, ಜೋರಾಗಿ ಸುರಿಯುತ್ತಿರುವ ಮಳೆ, ಇದ್ದಕ್ಕಿದ್ದಂತೆ ಮನೆಯ ಸುತ್ತಲಿನ ಪ್ರದೇಶವೆಲ್ಲ ನೀರು ತುಂಬಿ ನದಿಯಂತೆ ಪರಿವರ್ತನೆಯಾದ ರೀತಿ, ಹಿಮಾಲಯ ಪರ್ವತದಂತೆ ಕಣ್ಣಿಗೆ ಕಾಣುತ್ತಿದ್ದ ಬೆಟ್ಟಗಳು ಕುಸಿಯುತ್ತಿರುವುದು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜೀವಿತವಧಿಯ ಅಂತಿಮ ಘಟ್ಟವನ್ನು ತಲುಪಿದ ಅನುಭವಿಸಿದ ಹಾಗಾಯ್ತು. ಇದು ಯಾವುದೇ ಸಿನಿಮಾದ ಕಥೆಯಲ್ಲಿ 2018 ರಲ್ಲಿ ಕೊಡಗು ಮತ್ತು ಸೋಮವಾರ ಪೇಟೆಯ ಆಸುಪಾಸಿನಲ್ಲಿ ನಡೆದಂತ ಘಟನೆ. ಜೋರಾಗಿ ಆರ್ಭಟಿಸಿದ ಮಳೆರಾಯ, ನದಿಯೇ ಇಲ್ಲದ ಪ್ರದೇಶ ಏಕಾಏಕಿ ನದಿಯಾಗಿ ಹರಿಯಿತು, ಮನೆಯ ಸುತ್ತಮುತ್ತಲಿನ ಗುಡ್ಡ ಕುಸಿಯಿತು, ಮನೆಯಳಗಿನ ಮಂದಿ ಇದನ್ನೆಲ್ಲ ನೋಡಿ ಗಾಬರಿಗೊಳ್ಳುತ್ತಿದ್ದಂತೆ ವಾಸವಾಗಿರುವ ಮನೆಯೆ ಬಿರುಕು ಬಿಟ್ಟು ಪಾಲು ಪಾಲಾಗಿ ಹೋಯ್ತು, ಒಂದು ಕಡೆ ಮಳೆರಾಯನ ರುದ್ರ ನರ್ತನ ಇನ್ನೊಂದು ಕಡೆ ಮನೆ ಕಳೆದುಕೊಂಡ ಜೀವಗಳ ಕಣ್ಣೀರ ಕಥೆಯನ್ನು ಹೇಳತೀರದು. ಅಂಗೈಯಷ್ಟಗಳ ಸೂರು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳು ಬೀದಿಪಾಲಗಿದ್ದವು. ವಿಷಯ ತಿಳಿದ ತಕ್ಷಣ ಸರಕಾರ ಮತ್ತು ಸಂಘ- ಸಂಸ್ಥೆಗಳು ನಿರಾಶ್ರಿತರ ನೆರವಿಗೆ ಧಾವಿಸಿದರು. ಹಾನಿಗೀಡಾದ ಪ್ರದೇಶದ ಜನರನ್ನು ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿಸುವಲ್ಲಿ ಸಹಕರಿಸಿದರು. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃಧ್ದರು, ಗರ್ಭಿನಿಯರು ಹೀಗೆ ತಮ್ಮ ತಮ್ಮ ಮನೆ ಕಳೆದುಕೊಂಡವರಿಗಾಗಿ ಗಂಜಿಕೇಂದ್ರಗಳನ್ನು ತೆರೆಯಲಾಯಿತು. ಮನೆ ಜಮೀನು ಮಾತ್ರವಲ್ಲದೆ ಮನೆಯಲ್ಲಿ ಸಾಕಿ ಸಲುಹಿದ ಪ್ರಾಣಿಗಳನ್ನು ಸಹ ಮರೆತು ಬಿಡುವಂತೆ ಮಾಡಿತು. ಅಕ್ಕ- ಪಕ್ಕದವರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿಕೊಂಡು ಜೀವನ ನಡೆಸುತ್ತಿದ್ದವರೆಲ್ಲ ಅಲ್ಲಿಂದ ತಕ್ಷಣ ಜಾಗ ಖಾಲಿಮಾಡಿ ಗಂಜಿಕೇಂದ್ರಗಳನ್ನು ಸೇರಬೇಕಾಯ್ತು. ಕೆಲವು ದಿನಗಳನ್ನು ಗಂಜಿಕೇಂದ್ರಗಳಲ್ಲಿ ಕಳೆದ ಈ ಕುಟುಂಬಗಳು ನಂತರ ಸಂಬಂಧಿಕರ ಮನೆಗಳನ್ನು ಸೇರಿಕೊಂಡರು ಇನ್ನು ಕೆಲವರು ಬಾಡಿಗೆ ಮನೆಗಳನ್ನು ಅವಲಂಭಿಸಬೇಕಾಯ್ತು. ಹುಟ್ಟು ಸಾವುಗಳೆನಿದ್ದರೂ ಇದಕ್ಕೆಲ್ಲ ಸ್ವಂತ ಮನೆಗಳಿಲ್ಲದೆ ಕಷ್ಟ ಅನುಭವಿಸುತ್ತಿದ್ದರು. ಇದೀಗ ಸಂತ್ರಸ್ಥರ ಮುಖದಲ್ಲಿ ಮಂದಹಾಸ ಮೂಡಿದೆ, ಸರಕಾರ ಸಂತ್ರಸ್ಥರಿಗಾಗಿ ಕೊಡಗು ಜಿಲ್ಲೆಯ ಜಂಬೂರು ಮತ್ತು ಮಾದಪುರದಲ್ಲಿ ಈಗಾಗಲೆ 463 ಮನೆಗಳನ್ನು ನಿರ್ಮಿಸಿದೆ. ಸಂತ್ರಸ್ತರು ಇನ್ನು ಈ ಮನೆಗಳನ್ನು ಅವಲಂಭಿಸಲಿದ್ದಾರೆ. 2018 ರಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಸೂರು ಕಳೆದುಕೊಂಡು ಕಣ್ಣೀರು ಸುರಿಸಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇದೀಗ ಸರಕಾರ ನಿರ್ಮಿಸಿಕೊಟ್ಟ ಮನೆಗಳನ್ನು ಪಡೆದುಕೊಳ್ಳುವ ಸಂಭ್ರಮ ಸಡಗರದಲ್ಲಿದ್ದಾರೆ. ವಾಸಿಸಲೊಂದು ಸೂರು ಕಟ್ಟಿಕೊಂಡು ಜೀವನ ಸಾಗಿಸಲು ಒಂದಷ್ಟು ಜಮೀನು ಮಾಡಿಕೊಂಡು ಅದರಲ್ಲಿ ಖುಷಿಯನ್ನು ಸಂಭ್ರಮಿಸುತ್ತಿದ್ದ ಜೀವಗಳು ಏಕ ಏಕಿ ಇದೆಲ್ಲವನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದರು. ಮನೆಯ ಅಕ್ಕ-ಪಕ್ಕದ ಮಕ್ಕಳ ಜೊತೆ ಸೇರಿಕೊಂಡು ಖುಷಿ ಖುಷಿಯಾಗಿ ಶಾಲೆಗೆ ಹೆಜ್ಜೆಹಾಕುತ್ತಿದ್ದ ಮಕ್ಕಳ ಮನಸಿನ ವೇದನೆಗಳನ್ನು ಪಾಪ ಅರ್ಥೈಸಿಕೊಳ್ಳಲು ಅಸಾಧ್ಯ. ಸ್ವಂತದೊಂದು ಸೂರು ಕಟ್ಟಿಕೊಂಡು ಟಿವಿ ಪ್ರಿಡ್ಜ್ ಹೀಗೆ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತುಂಬಿಸಿ ಎಲ್ಲರಂತೆ ನಾವು ಬದುಕಬೇಕು ಎಂದು ಕನಸು ಕಂಡಿದ್ದ ಜೀವಗಳು ಎಲ್ಲವನ್ನು ಕಳೆದುಕೊಂಡು ನೆಮ್ಮದಿಯನ್ನೆ ಕಳೆದುಕೊಂಡಿದ್ದರು. ವೃದ್ದರು, ಗರ್ಭಿನೀಯರು ಹಾಗೂ ಬಾಣಂತಿಯರ ಗೋಳುಗಳನ್ನು ಹೇಳತೀರದಂತ ಕಥೆಯಾಗಿತ್ತು, ನೆರವಿಗೆ ಬಂದ ಅದೇಷ್ಟೊ ಸಂಘ- ಸಂಸ್ಥೆಗಳು ಆಹಾರ ಸಾಮಾಗ್ರಿಗಳು ಮಾತ್ರವಲ್ಲದೆ ಉಡುಗೆ ತೊಡುಗೆಗಳನ್ನು ಒದಗಿಸಿಕೊಟ್ಟಿದ್ದಾರೆ. ಸ್ವಂತ ಮನೆಯಿಲ್ಲದೆ ಕಣ್ಣೀರಿಡುವ ಜೀವಗಳ ನೋವುಗಳಿಗೆ ಸ್ಪಂಧಿಸಿದ ರಾಜ್ಯ ಸರಕಾರ ಸಂತ್ರಸ್ಥರಿಗೆ ಮನೆ ನಿರ್ಮಿಸಿಕೊಟ್ಟಿದೆ. ವಾಸಿಸಲು ಗಂಜಿಕೇಂದ್ರಗಳು ತೆರಿದ್ದರು ಸಹ ಮಾನಸಿಕ ನೆಮ್ಮದಿಯನ್ನೆ ಕಳೆದುಕೊಂಡ ಜೀವಗಳ ಮುಖದಲ್ಲಿಂದು ಸಂತೋಷದ ಭಾಷ್ಪಂಜಲಿ ಹರಿಯುತ್ತಿದೆ.
ಮನೆಯೇ ದೇವಾಲಯ ಎಂಬಂತೆ ಇಂದು ಸರಕಾರ ತಮಗೆ ನೀಡಿರುವ ಮನೆಗಳಿಗೆ ಸಂತ್ರಸ್ಥರು ಸಂತೋಷ ಸಡಗರದೊಂದಿಗೆ ಕಾಲಿಡುತ್ತಿದ್ದಾರೆ, ಇಷ್ಟು ದಿನ ತಮಗೆ ವಾಸಿಸಲು ಸ್ವಂತ ಮನೆಯಿಲ್ಲ ಎಂದು ಮನದೊಳಗೆ ಯೋಚಿಸಿ ಕಣ್ಣೀರಿಡುತ್ತಿದ್ದ ಸಂತ್ರಸ್ಥರ ಮನಸಲ್ಲಿ ಸಂತೋಷ ಮನೆ ಮಾಡಿದೆ. ಇಂದು ಇವರ ಮುಖದಲ್ಲಿ ಮೂಡಿದ ನಗು ಎಂದು ಮಾಸದಿರಲಿ, ಇವರು ಪ್ರವೇಶಿಸಿದ ಈ ಮನೆಗಳಲ್ಲಿ ನೆಮ್ಮದಿಯ ವಾತಾವರಣ ಶಾಶ್ವತವಾಗಿ ಉಳಿಯಲಿ ಎಂಬುದೆ ನಮ್ಮ-ನಿಮ್ಮೆಲ್ಲರ ಆಶಯ.
✍ VIDYA Art Creations
Harish Puttur