ರಾಜ್ಯದ ಶಾಲಾ ಕಾಲೇಜುಗಳನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲು ಕೇಂದ್ರ ಗೃಹ ಇಲಾಖೆ ಅಸ್ತು | ಆದರೆ ಕಡ್ಡಾಯವಾಗಿ ಹೆತ್ತವರ, ಪೋಷಕರ ಅಭಿಪ್ರಾಯ ಸಂಗ್ರಹಿಸಲು ಸೂಚನೆ
ಬೆಂಗಳೂರು,ಜೂನ್ 2 : ರಾಜ್ಯದ ಶಾಲಾ ಕಾಲೇಜುಗಳನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲು ಕೇಂದ್ರ ಗೃಹ ಇಲಾಖೆ ಅಸ್ತು ಎಂದಿದೆ. ಆದರೆ ಶಾಲೆಗಳ ಬಾಗಿಲು ತೆರೆಯುವ ಮುನ್ನ ಕಡ್ಡಾಯವಾಗಿ ಹೆತ್ತವರ, ಪೋಷಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ.
ಹೀಗಾಗಿ ಜೂನ್ 10 ರಿಂದ 12 ರವರೆಗೆ ಪೋಷಕರೊಂದಿಗೆ ಚರ್ಚೆ ನಡೆಸಿದ ನಂತರವಷ್ಟೆ ಅಭಿಪ್ರಾಯ ತಿಳಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಶಾಲಾ ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಕುರಿತು ಪೋಷಕರ ಅಭಿಪ್ರಾಯ ಪಡೆಯಲಾಗುತ್ತದೆ.
ಜೂನ್ 10 ರಿಂದ 12 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಪೋಷಕರು ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರ ಅಭಿಪ್ರಾಯ ಪಡೆಯಲು ಸೂಚಿಸಲಾಗಿದೆ. ಮೇ 28 ಕ್ಕೆ ವರ್ಷಂಪ್ರತಿ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದ, ಆದರೆ ಈ ವರ್ಷ ಕೊರೋನ ಮಹಾಮಾರಿಯಿಂದ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲಾಗಿಲ್ಲ. ಸದ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ನಡೆಯಲಿದ್ದು ಇದರ ಜೊತೆಗೆ ಶಾಲಾ ಕಾಲೇಜು ಪ್ರಾರಂಭದ ಬಗ್ಗೆ ಸಚಿವರು ಚಿಂತನೆ ನಡೆಸುತ್ತಿದ್ದಾರೆ.
ಶಾಲೆಗಳನ್ನು ಪುನಾರಂಭ ಮಾಡಲು ದಿನಾಂಕ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೀತಿ, ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದ್ದು, ಈ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.